ಹೈದರಾಬಾದ್ (ತೆಲಂಗಾಣ):ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ಮೂವರು ಆಟೋ ಚಾಲಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ನಗರದ ಹನುಮಕೊಂಡ ನಯೀಮ್‌ನಗರ ನಿವಾಸಿಯಾದ ವಿವಾಹಿತ ಮಹಿಳೆ ಏಪ್ರಿಲ್ 27 ರಂದು ಕೆಲಸಕ್ಕೆಂದು ಹೊರಗೆ ಹೋಗಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಕೆಯು ಕ್ರಾಸ್ ಬಳಿ ಬಂದಾಗ ಆಟೋವೊಂದು ಬಂದಿದೆ. ಮಧ್ಯರಾತ್ರಿ ಆಗಿದ್ದರಿಂದ ರಸ್ತೆಯಲ್ಲಿ ಏಕಾಂಗಿಯಾಗಿ ಹೋಗುತ್ತಿದ್ದ ಮಹಿಳೆ ಆಟೋವನ್ನು ನಿಲ್ಲಿಸಿ, ರಂಗಬಾರ್ಗೆ ಬಿಡುವಂತೆ ಕೇಳಿಕೊಂಡಿದ್ದರು.
ಆಟೋ ಹತ್ತಿಸಿಕೊಂಡ ಚಾಲಕ, ಸ್ವಲ್ಪ ದೂರ ಹೋದ ಬಳಿಕ ತನ್ನಿಬ್ಬರು ಸ್ನೇಹಿತರಿಗೆ ಕರೆ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಬಂದ ಸ್ನೇಹಿತರು ಆಟೋವನ್ನು ಹತ್ತಿದ್ದಾರೆ. ಮಹಿಳೆ ಹೇಳಿದ ಜಾಗಕ್ಕೆ ಬದಲಾಗಿ ಆಟೋವನ್ನು ಭೀಮಾರಾಮ್ ಕಡೆಗೆ ತಿರುಗಿಸಿದ್ದಾರೆ. ಮಹಿಳೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿ, ಕೂಗತೊಡಗಿದರು. ಆಟೋದಲ್ಲಿದ್ದ ವ್ಯಕ್ತಿಗಳು ಆಕೆಯನ್ನು ಬೆದರಿಕೆ ಹಾಕಿ ಸಮ್ಮನಿರಿಸಿದ್ದಾರೆ.
ಭೀಮಾರಾಮ್ ಗ್ರಾಮದ ಹೊರವಲಯಕ್ಕೆ ಹೋಗಿ, ಅಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ರಂಗಬಾರ್ನಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಮನೆಗೆ ತೆರಳಿದ ಮಹಿಳೆ, ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಹನುಮಕೊಂಡ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಮಹಿಳೆ ನೀಡಿದ ಸುಳಿವಿನ ಮೇರೆಗೆ ಮೂವರು ಕಿರಾತಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹನುಮಕೊಂಡ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.