ಶಾದ್ನಗರ (ತೆಲಂಗಾಣ):ತಾಯಿ ಮತ್ತು ಮಕ್ಕಳದ್ದು ಕರುಳಬಳ್ಳಿಯ ಸಂಬಂಧ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳು ಎಲ್ಲೇ ಇದ್ದರೂ ಅವರ ಸೆಳೆತ ಹೆತ್ತಮ್ಮನನ್ನು ಸೆಳೆಯುತ್ತಲೇ ಇರುತ್ತದೆ. ಆದರೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತನ್ನ ಮಗುವನ್ನು ಮರಳು ಪಡೆಯಲು ಇಚ್ಛಿಸಿದ್ದ ಮಹಿಳೆಯೊಬ್ಬರು ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಶಾದ್ನಗರ ಪಾಲಿಕೆ ವ್ಯಾಪ್ತಿಯ ಚತನ್ಪಲ್ಲಿ ಗ್ರಾಮದಲ್ಲಿ ಬಿಹಾರದ ಮೂಲದ ಮಹಿಳೆಯೊಬ್ಬರು ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ಮಗುವನ್ನು ಮಾರಾಟ ಮಾಡಿದ್ದಳು. ಆದರೆ, ಆ ಮಗುವನ್ನು ಆಕೆಗೆ ಮರೆಯಲು ಸಾಧ್ಯವಾಗಿಲ್ಲ. ಹೀಗಾಗಿ ತನ್ನ ಮಗುವನ್ನು ವಾಪಸ್ ನೀಡುವಂತೆ ಕೇಳಿಕೊಂಡಿದ್ದಳು. ಆದರೆ, ಮಗುವನ್ನು ಖರೀದಿಸಿದ್ದ ವ್ಯಕ್ತಿ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ. ಕೊಲೆಯಾದ ಮಹಿಳೆಯನ್ನು ದೇವಕಿ (30) ಎಂದು ಗುರುತಿಸಲಾಗಿದೆ.
ಪೋಷಿಸಲು ಕಷ್ಟ ಎಂದು ಮಗು ಮಾರಾಟ: ಕೊಲೆಯಾದ ದೇವಕಿ ಕೆಲವು ತಿಂಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದಳು. ಈ ವೇಳೆ ಆಕೆ ಗರ್ಭಿಣಿಯಾಗಿದ್ದಳು. ಒಂಟಿಯಾಗಿ ಜೀವಿಸುತ್ತಿದ್ದು, ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಮಗುವನ್ನು ಪೋಷಿಸಲು ಕಷ್ಟ ಎಂದು ಮಾರಾಟ ಮಾಡಲು ನಿರ್ಧರಿಸಿದ್ದಳು. ಅಂತೆಯೇ, ಪುರುಷೋತ್ತಮ ಎಂಬ ವ್ಯಕ್ತಿಯ ನೆರವಿನಿಂದ ರಾಮುಲು ಮತ್ತು ಶರದಾ ದಂಪತಿಗೆ ಮಾರಾಟ ಮಾಡಿದ್ದಳು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ತಿಳಿಸಿದರು.
ಮಗು ಬಿಟ್ಟಿರಲಾಗದೆ ಸಂಕಟ: ರಾಮುಲು-ಶರದಾ ದಂಪತಿ ಈಗಾಗಲೇ 13 ವರ್ಷದ ಹೆಣ್ಣು ಮಗು ಹೊಂದಿದ್ದು, ಗಂಡು ಮಗುವನ್ನೂ ಪಡೆಯಲು ತೀರ್ಮಾನಿಸಿದ್ದರು. ಈ ನಿಟ್ಟಿನಲ್ಲಿ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಮಗು ಖರೀದಿಸಿದ್ದರು. ಆದರೆ, ಮಗು ಮಾರಾಟ ಮಾಡಿದ ಬಳಿಕ ದೇವಕಿಗೆ ತನ್ನ ಮಗುವನ್ನು ಬಿಟ್ಟಿರಲು ಸಾಧ್ಯವಾಗಿಲ್ಲ. ಹೀಗಾಗಿ ಮಗುವನ್ನು ಮರಳಿ ಪಡೆಯಲು ನಿರ್ಧರಿಸಿದ್ದಳು. ಇದಕ್ಕಾಗಿ ರಾಮುಲು ಮನೆಗೆ ಹೋಗಿ ನನ್ನ ಮಗುವನ್ನು ಕೊಡಿ, ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಲು ಶುರು ಮಾಡಿದ್ದಳು. ಆದರೆ, ಮಗುವನ್ನು ಕೊಡಲು ತಯಾರಿಲ್ಲದ ರಾಮುಲು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ ಎಂದು ಎಸ್ಐ ಮಾಹಿತಿ ನೀಡಿದರು.
ಕೊಲೆ ಮಾಡಿದ ಶವ ಎಸೆದ ಆರೋಪಿ: ಇದೇ ಸೋಮವಾರ ಮಗುವನ್ನು ಪಡೆಯಲು ಮತ್ತೆ ರಾಮುಲು ಮನೆಗೆ ಹೋದಾಗ ದೇವಕಿಗೆ ಚುನ್ನಿಯಿಂದ(ಮಹಿಳೆಯರು ಧರಿಸುವ ಬಟ್ಟೆ) ಬಿಗಿದು ಕೊಲೆ ಮಾಡಲಾಗಿದೆ. ನಂತರ ಶವವನ್ನು ರಸ್ತೆ ಬದಿ ಎಸೆಯಲಾಗಿದೆ. ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ರಾತ್ರಿ 12.30ರ ಸುಮಾರಿಗೆ ಮಹಿಳೆಯ ಶವ ಬಿದ್ದಿರುವುದನ್ನು ಗಮನಿಸಿದ್ದಾರೆ. ಅಂತೆಯೇ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ಪ್ರಕರಣವನ್ನು ವಿವರಿಸಿದರು.
ಮಹಿಳೆಯ ಶವ ಪತ್ತೆಯಾದ 12 ಗಂಟೆಯೊಳಗೆ ಇಡೀ ಪ್ರಕರಣವನ್ನು ಬಗೆಹರಿಸಲಾಗಿದೆ. ಈಗಾಗಲೇ ಆರೋಪಿ ರಾಮುಲುವನ್ನು ಬಂಧಿಸಲಾಗಿದೆ. ಅಲ್ಲದೇ, ಅಂದು ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯಾದ ರಫಿ ಮತ್ತು ಭೂಪಾಲ್ ರೆಡ್ಡಿ ಅವರಿಗೆ ಸೈಬರಾಬಾದ್ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ಬಹುಮಾನ ಘೋಷಿಸಿದ್ದಾರೆ ಎಂದು ಎಸ್ಐ ನವೀನ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:5 ತಿಂಗಳಲ್ಲಿ ಎರಡು ಬಾರಿ ವಧುವಾಗಿ ಮಾರಾಟವಾಗಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ