ಪತ್ತನಂತಿಟ್ಟ(ಕೇರಳ): ಕೇರಳದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು, ತಾವು ಆರು ವರ್ಷದವಳಿದ್ದಾಗ ಇಬ್ಬರು ಪುರುಷರಿಂದ ಎದುರಾದ ಸಂಕಷ್ಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಡಾ. ದಿವ್ಯಾ ಎಸ್. ಅಯ್ಯರ್ ಅವರು ತಮ್ಮ ಬಾಲ್ಯದ ವಯಸ್ಸಿನಲ್ಲಿ ತಾವು ಅನುಭವಿಸಿದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ.
ಬಾಲಕಿಯಾಗಿದ್ದಾಗ ನಡೆದ ಕೆಟ್ಟ ಅನುಭವದ ಬಗ್ಗೆ ಕಲೆಕ್ಟರ್ ಹೇಳಿದ್ದು ಹೀಗೆ:''ಇಬ್ಬರು ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದರು. ಅವರು ಏಕೆ ಸ್ಪರ್ಶಿಸುತ್ತಿದ್ದರು ಅಥವಾ ಪ್ರೀತಿಯಿಂದ ವರ್ತಿಸುತ್ತಿದ್ದಾರೆಂಬುದು ನನಗೆ ಅರ್ಥವಾಗಿರಲಿಲ್ಲ. ಅವರು ನನ್ನ ಬಟ್ಟೆಗಳನ್ನು ತೆಗೆದಾಗ ನನಗೆ ಬೇಸರವಾಯಿತು. ನಂತರ ನಾನು ಓಡಿಹೋಗಿದ್ದೆ. ಆ ಆಘಾತದಿಂದ ಪಾರಾಗಲು ನನ್ನ ತಂದೆ-ತಾಯಿ ನೀಡಿದ ಮಾನಸಿಕ ಬೆಂಬಲದಿಂದ ಮಾತ್ರ ಸಾಧ್ಯವಾಯಿತು. ನಂತರ, ನಾನು ಜನಸಂದಣಿಗೆ ಹೋದಾಗ, ನಾನು ಎಲ್ಲರ ಮೇಲೆ ಕಣ್ಣಿಡುತ್ತಿದ್ದೆ. ಆ ಎರಡು ಮುಖಗಳು ಎಲ್ಲೋ ಇವೆ ಅನಿಸುತ್ತಿತ್ತು. ಆದರೆ, ಅವರು ಯಾರೆಂದು ನನಗೆ ತಿಳಿಯಲಿಲ್ಲ. ಮತ್ತೆ ಅವರನ್ನು ನಾನು ನೋಡಿಲ್ಲ. ಆದರೆ, ಅವರ ಮುಖ ನನಗೆ ಇನ್ನೂ ನೆನಪಿದೆ. ಆ ಆರು ವರ್ಷದ ಬಾಲಕಿಗೆ ಆಗ ಏನನ್ನೂ ಗುರುತಿಸಲು ಸಾಧ್ಯವಾಗಲಿಲ್ಲ'' ಎಂದು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ಎದುರಿಸಿದ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿ ಹೇಳಿದರು.
ಮಕ್ಕಳನ್ನು ಮಾನಸಿಕ ಆಘಾತಕ್ಕೆ ದೂಡದಂತೆ ಸಲಹೆ:ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ ಗುರುತಿಸುವುದನ್ನು ಕಲಿಸಿ ಚಿಟ್ಟೆಗಳಂತೆ ಹಾರಾಡಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಮಾನಸಿಕ ಆಘಾತಕ್ಕೆ ದೂಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಮಕ್ಕಳು ಎದುರಿಸಬಹುದಾದ ಹಿಂಸೆಯ ಬಗ್ಗೆ ಪೋಷಕರು ಮತ್ತು ಶಿಕ್ಷಕರು ತಿಳಿಸಬೇಕು ಎಂದು ದಿವ್ಯಾ ಎಸ್ ಅಯ್ಯರ್ ಸಲಹೆ ನೀಡಿದರು.
ಬಾಲಕಿಯೊಬ್ಬಳು ಮಾನಸಿಕವಾಗಿ ಕುಸಿದಿರುವ ಘಟನೆ ಹಂಚಿಕೊಂಡ ಡಿಸಿ: ಕೋನ್ನಿ ತಾಲೂಕು ಕಚೇರಿ ಸಿಬ್ಬಂದಿ ವಿಹಾರ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಿಂದ ಬಾಲಕಿಯೊಬ್ಬಳು ಮಾನಸಿಕವಾಗಿ ಕುಸಿದಿರುವ ಘಟನೆಯನ್ನೂ ದಿವ್ಯಾ ಎಸ್ ಅಯ್ಯರ್ ಹಂಚಿಕೊಂಡಿದ್ದಾರೆ. ಕೊನ್ನಿ ತಾಲೂಕು ಕಚೇರಿಯಿಂದ ನೌಕರರು ವಿಹಾರಕ್ಕೆ ತೆರಳುವ ವಿಚಾರವಾಗಿ ವಿವಾದ ಉಂಟಾದಾಗ, ನೌಕರರು ಪ್ರವಾಸಕ್ಕೆ ತೆರಳಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಗುಂಪಿನಲ್ಲಿದ್ದ ಬಾಲಕಿಯೊಬ್ಬಳು ಅನುಭವಿಸಿದ ಮಾನಸಿಕ ಹಿಂಸೆ ಮಾಮೂಲಿಯಲ್ಲ. ವಿವಾದಾತ್ಮಕ ಮನರಂಜನಾ ಪ್ರವಾಸದಲ್ಲಿ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರ ಖಾಸಗಿ ಕ್ಷಣಗಳ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಯಾರೋ ವ್ಯಕ್ತಿಗಳ ಖಾಸಗಿ ಕ್ಷಣಗಳನ್ನು ಪರಿಗಣಿಸದೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರ ಪರಿಣಾಮಗಳ ಬಗ್ಗೆ ಯೋಚಿಸದೆ ಮಾಡಿದ ಕೃತ್ಯವಾಗಿತ್ತು. ಒಬ್ಬ ವ್ಯಕ್ತಿಯು ಮುಂಭಾಗದಿಂದ ಹಾಡುತ್ತಿರುವ ಚಿತ್ರವು ಹೆಚ್ಚು ಪ್ರಸಾರವಾಗಿದೆ. ಆ ವ್ಯಕ್ತಿ ನಮ್ಮ ಉದ್ಯೋಗಿಯಾಗಿರಲಿಲ್ಲ. ಅವಳು ನಮ್ಮ ಅಧಿಕಾರಿಯೊಬ್ಬರ ಮಗಳು. ಒಂದೇ ದಿನದಲ್ಲಿ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದೆ. ಇದು ಎಂದಿಗೂ ಒಳ್ಳೆಯದಲ್ಲ ಎಂದು ಡಿಸಿ ಆತಂಕ ವ್ಯಕ್ತಪಡಿಸಿದರು.