ಗುರುದಾಸ್‌ಪುರ (ಪಂಜಾಬ್): ಸರಳವಾಗಿ ನಡೆದುಕೊಂಡು ಬಂದ ಗರ್ಭಿಣಿಯೊಬ್ಬರು ಗುರುದಾಸ್‌ಪುರದ ಸರ್ಕಾರಿ ಆಸ್ಪತ್ರೆಯ ಜನೌಷಧ ಕೇಂದ್ರದ ಹೊರಭಾಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆಯಿತು. ಜನನಿಬಿಡ ಪ್ರದೇಶದಲ್ಲಿ ಹೆರಿಗೆ ಆಗಿದ್ದರಿಂದ ಆಸ್ಪತ್ರೆಯ ವೈದ್ಯರು ಕೆಲಹೊತ್ತು ಇಕ್ಕಟ್ಟಿಗೆ ಸಿಲುಕಬೇಕಾಯಿತು. ಹೆರಿಗೆಯಾದ ದೃಶ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮಗು ಮತ್ತು ತಾಯಿ ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಗುರುದಾಸ್‌ಪುರದ ಧಾರಿವಾಳ ನಿವಾಸಿ ಲಕ್ಷ್ಮಿ ಎಂಬ ಗರ್ಭಿಣಿ ಹೊಟ್ಟೆ ನೋವು ಅಂತ ಪತಿ ಶುಭಂ ಜೊತೆಗೆ ಇಂದು ಆಸ್ಪತ್ರೆಗೆ ಬಂದಿದ್ದರು. ತುಂಬು ಗರ್ಭಿಣಿಯಾಗಿದ್ದರೂ ಲಕ್ಷ್ಮಿ ನಡೆದುಕೊಂಡೇ ಬರುತ್ತಿದ್ದರು. ಆಸ್ಪತ್ರೆಯ ಒಳಗೆ ಇನ್ನೇನು ಹೋಗಬೇಕಿತ್ತು. ಅಷ್ಟರಲ್ಲೇ ಹೊರಭಾಗದಲ್ಲಿ ಮಗುವಿಗೆ ಜನ್ಮ ನೀಡಿದರು. ಸ್ಥಳ ಜನನಿಬಿಡ ಪ್ರದೇಶವಾಗಿದ್ದರಿಂದ ವೈದ್ಯರು ಕೆಲಹೊತ್ತು ಇಕ್ಕಟ್ಟಿಗೆ ಸಿಲುಕಬೇಕಾಯಿತು. ಪತಿಯೊಂದಿಗೆ ಸರಳವಾಗಿಯೇ ನಡೆದುಕೊಂಡು ಬಂದ ಗರ್ಭಿಣಿ ಲಕ್ಷ್ಮಿ ತನಗೆ ಅರಿವಿಗೆ ಬರದೇ ಕ್ಷಣ ಮಾತ್ರದಲ್ಲಿ ಮಗುವಿನ ಜನ್ಮ ನೀಡಿದ್ದು ಅಲ್ಲಿದ್ದವರಿಗೂ ಅಚ್ಚರಿ ತರಿಸಿತು. ಪತ್ನಿ ಲಕ್ಷ್ಮಿಗೆ ಹೆರಿಗೆ ಆಗುತ್ತಿದ್ದಂತೆ ಪತಿ ಶುಭಂ ಮಗುವನ್ನು ಶುಶ್ರೂಷಕ ಸಿಬ್ಬಂದಿಗೆ ನೀಡಿದರು.
''ಬಳಿಕ ಆಸ್ಪತ್ರೆ ಸಿಬ್ಬಂದಿ ಮಗು ಮತ್ತು ತಾಯಿಯನ್ನು ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ. ವಾರ್ಡ್ಗೆ ಶಿಫ್ಟ್ ಆದ ಬಳಿಕ ಅಗತ್ಯವಿರುವ ಎಲ್ಲಾ ಚುಚ್ಚುಮದ್ದನ್ನು ಬಾಣಂತಿ ಲಕ್ಷ್ಮಿಗೆ ನೀಡಲಾಯಿತು. ಸದ್ಯ ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ'' ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.