ಆದಿಲಾಬಾದ್ (ತೆಲಂಗಾಣ): ಮಹಿಳೆಯೊಬ್ಬರು ಸಾರಿಗೆ ಸಂಸ್ಥೆಯ ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಜೀವನಪೂರ್ತಿ ಬಸ್ ಸಂಚಾರಕ್ಕೆ ಉಚಿತ ಬಸ್ ಪಾಸ್ ನೀಡಲಾಗಿದೆ. ಇಂಥದೊಂದು ಅಚ್ಚರಿಯ ಘಟನೆ ತೆಲಂಗಾಣದ ಆದಿಲಾಬಾದ್ನಲ್ಲಿ ನಡೆದಿದೆ.
ಮಹಾರಾಷ್ಟ್ರದ ಕಿನ್ವತ್ ತಾಲೂಕಿನ ಸಿಂಗಾರಿವಾಡಾ ನಿವಾಸಿಯಾದ ಮದಾವಿ ರತ್ನಮಾಲಾ ಹೆಸರಿನ ಗರ್ಭಿಣಿ ಇಂದ್ರವೆಲ್ಲಿಯಲ್ಲಿ ವಾಸಿಸುತ್ತಿದ್ದರು. ಅವರು ಭಾನುವಾರದಂದು ತಮ್ಮ ಕುಟುಂಬಸ್ಥರೊಂದಿಗೆ ಇಂದ್ರವೆಲ್ಲಿಯಿಂದ ಆದಿಲಾಬಾದ್ಗೆ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು.
ರತ್ನಮಾಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಗುಡಿಹಾತನೂರ್ ವಲಯದ ಮಾಣಕಾಪುರ ಎಂಬಲ್ಲಿ ಬಸ್ ನಿಲ್ಲಿಸಲಾಯಿತು. ಆದರೆ, 108 ಆ್ಯಂಬುಲೆನ್ಸ್ ಸಕಾಲಕ್ಕೆ ಬಾರದ ಕಾರಣ ಅವರಿಗೆ ಬಸ್ನಲ್ಲೇ ಹೆರಿಗೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಬಸ್ ಡ್ರೈವರ್ ಸ್ವತಃ ವೈದ್ಯರ ಪಾತ್ರ ನಿರ್ವಹಿಸಿದರು. ನಂತರ ಬಸ್ ಅನ್ನು ತಕ್ಷಣವೇ ಗುಡಿಹಾತನೂರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.