ವನಪರ್ತಿ(ತೆಲಂಗಾಣ): ಕಳೆದ 10 ವರ್ಷಗಳ ಹಿಂದೆ ವನಪರ್ತಿಯ ಗಾಂಧಿನಗರದ ನಿವಾಸಿ ಬಾಲಸ್ವಾಮಿ(39) ಜೊತೆ ವಿವಾಹವಾಗಿದ್ದ ಲಾವಣ್ಯ ಪ್ರಿಯಕರನಿಗೋಸ್ಕರ ಗಂಡನ ಕೊಲೆ ಮಾಡಿದ್ದು, ಮೂರು ತಿಂಗಳ ಹಿಂದೆ ನಡೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತೆಲಂಗಾಣ ಪೊಲೀಸರು ಆರೋಪಿಗಳ ಬಂಧನ ಮಾಡಿದ್ದಾರೆ.
ಲಾವಣ್ಯ ಹಾಗೂ ಬಾಲಸ್ವಾಮಿಗೆ ಓರ್ವ ಮಗ, ಮಗಳು ಇದ್ದಾರೆ. ಕುಟುಂಬದ ಪೋಷಣೆಗೆ ಗಂಡ ಕೂಲಿ ಕೆಲಸ ಮಾಡ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಬಾಲಸ್ವಾಮಿ ಭೇಟಿಗೋಸ್ಕರ ಮದನಪಲ್ಲಿಯ ಸ್ನೇಹಿತ ನವೀನ್ ವನಪರ್ತಿಗೆ ಮೇಲಿಂದ ಮೇಲೆ ಬರುತ್ತಿದ್ದ. ಈ ವೇಳೆ ಲಾವಣ್ಯಳ ಮೇಲೆ ಆತನ ಕಣ್ಣು ಬಿದ್ದಿದೆ. ಕೆಲ ತಿಂಗಳ ಹಿಂದೆ ಬಾಲಸ್ವಾಮಿ ತನ್ನ ಜಮೀನು ಮಾರಾಟ ಮಾಡಿ ನವೀನ್ನಿಂದ 20 ಲಕ್ಷ ರೂ. ಪಡೆದುಕೊಂಡಿದ್ದಾನೆ. ಹೀಗಾಗಿ, ನವೀನ್ ಬಳಿ ಹೆಚ್ಚಿನ ಹಣವಿರುವ ಬಗ್ಗೆ ಅರಿತುಕೊಂಡಿರುವ ಲಾವಣ್ಯ ಆತನೊಂದಿಗೆ ವಾಸ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ. ಇದರ ಬೆನ್ನಲ್ಲೇ ಗಂಡನ ಕೊಲೆ ಮಾಡುವ ಸಂಚು ರೂಪಿಸಿದ್ದಾಳೆ.
ದೇವಿಗೆ ಕೋಳಿ ಬಲಿ ಕೊಡುವ ನೆಪ:ಜನವರಿ ತಿಂಗಳಲ್ಲಿ ದೇವಸ್ಥಾನಕ್ಕೆ ಗಂಡನನ್ನ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದಾಳೆ. ಈ ವಿಚಾರವನ್ನು ನವೀನ್ಗೆ ಮುಂಚಿತವಾಗಿ ತಿಳಿಸಿದ್ದಾಳೆ. ಮೈಸಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ನವೀನ್ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಬಾಲಸ್ವಾಮಿಯನ್ನ ಬಲವಂತವಾಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದು, ಪತ್ನಿಯ ಸಮ್ಮುಖದಲ್ಲೇ ಕೊಲೆಗೈದಿದ್ದಾರೆ. ಇದಾದ ಬಳಿಕ ಕೋಟಾದ ಹೊರವಲಯದಲ್ಲಿ ಆತನ ಫೋನ್ ಎಸೆದು ಪರಾರಿಯಾಗಿದ್ದಾರೆ.