ಹೈದರಾಬಾದ್(ತೆಲಂಗಾಣ) : ವಾರ್ಡ್ ಬಾಯ್ ಹಣಕ್ಕಾಗಿ ಆಕ್ಸಿಜನ್ ಪೈಪ್ ತೆಗೆದ ಹಿನ್ನೆಲೆ ಮೂರೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಹೌದು, ಈ ದಾರುಣ ಘಟನೆ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಯಲ್ಲಿ ನಡೆದಿದೆ. ಎರ್ಗಡ್ಡದ ಮೊಹಮ್ಮದ್ ಆಜಂ ಎಂಬವರ ಪುತ್ರ ಮೊಹಮ್ಮದ್ ಖಾಜಾ ಎಂಬ ಮಗು ಕೆಲ ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿತ್ತು. ಅವನನ್ನು ಈ ಮೊದಲು ಮತ್ತೊಂದು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚಿಗೆ ಬಿಲ್ ಆಗಿದ್ದರಿಂದ ಅಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ತಮ್ಮ ಮಗನನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಆರೋಗ್ಯ ಸ್ಥಿತಿ ನೋಡಿದ ವೈದ್ಯರು ವೆಂಟಿಲೇಟರ್‌ನಲ್ಲಿ ಇರಿಸಿದ್ದರು.
100 ರೂ.ಗಾಗಿ ಆಕ್ಸಿಜನ್ ಪೈಪ್ ತೆಗೆದ ವಾರ್ಡ್ ಬಾಯ್ ಮಗುವಿಗೆ ಶನಿವಾರ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಅತನಿಗೆ ಆಕ್ಸಿಜನ್ ಸಿಲಿಂಡರ್ ಅಳವಡಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವಾರ್ಡ್ ಬಾಯ್ ಸುಭಾಷ್ ಎಂಬಾತ ಆಕ್ಸಿಜನ್ ಪೈಪ್ ತೆಗೆದು ಪಕ್ಕದ ಬೆಡ್ ನಲ್ಲಿದ್ದ ಮತ್ತೊಬ್ಬ ರೋಗಿಗೆ ಇರಿಸಿದ್ದಾನೆ. ಈ ಬಗ್ಗೆ ಮಾಹಿತಿಯನ್ನು ನಾಂಪಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಎಂಡಿ ಖಲೀಲ್ ಪಾಷಾ ನೀಡಿದ್ದಾರೆ.
100 ರೂ.ಗೆ ವಾರ್ಡ್ ಬಾಯ್ ಆಮ್ಲಜನಕದ ಪೈಪ್ ತೆಗೆದಿರುವುದು ಬೆಳಕಿಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಮಗು ಕೋಮಾಕ್ಕೆ ಹೋಗಿದೆ. ನಂತರ ಕುಟುಂಬಸ್ಥರು ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಬರುವ ಮುನ್ನವೇ ಮಗು ಮೃತಪಟ್ಟಿದೆ. ಇದರಿಂದ ಆಕ್ರೋಶಗೊಂಡ ಕುಟುಂಬದವರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.