ನಲ್ಬರಿ (ಅಸ್ಸೋಂ): ಹಳ್ಳಿಗಳು ರಾಷ್ಟ್ರದ ಬೆನ್ನೆಲುಬು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದಾರೆ. ಅನೇಕ ಗ್ರಾಮಗಳು ಗಾಂಧೀಜಿಯವರ ಮಾತುಗಳಿಂದ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದರೆ ಇನ್ನೂ ಕೆಲ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕೆಲವು ಮಂದಿ ತಮ್ಮ ಸ್ವಂತ ಊರುಗಳಲ್ಲಿ ಉದ್ಯೋಗ ಸಿಗದ ಕಾರಣ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಹಳ್ಳಿಗಳನ್ನು ತೊರೆಯುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಸ್ಸೋಂನ ನಲ್ಬರಿ ಜಿಲ್ಲೆಯ ಬರ್ಧನರಾ ಗ್ರಾಮ.
ಹೌದು, ಒಂದು ಕಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಗ್ರಾಮದಲ್ಲಿ ಇಂದು ಐವರು ಸದಸ್ಯರಿರುವ ಒಂದೇ ಕುಟುಂಬ ವಾಸವಾಗಿದೆ. ಕಳೆದ ಕೆಲ ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ಬಿಷ್ಣುರಾಮ್ ಮೇಧಿ ಅವರು ಬರ್ಧನಾರ ಗ್ರಾಮದ ರಸ್ತೆ ಉದ್ಘಾಟಿಸಿದ್ದರು. ಆದರೆ, ಪದೇ ಪದೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಪುನಃ ರಸ್ತೆ ದುರಸ್ತಿ ಮಾಡದ ಹಿನ್ನೆಲೆ ಬಹುತೇಕ ಕುಟುಂಬಗಳು ನಗರಗಳಿಗೆ ವಲಸೆ ಹೋಗಿವೆ.
2011ರ ಜನಗಣತಿಯ ಪ್ರಕಾರ, ಬರ್ಧನಾರಾ ಗ್ರಾಮದಲ್ಲಿ 16 ಮಂದಿ ಮಾತ್ರ ವಾಸವಾಗಿದ್ದರು. ಪ್ರಸ್ತುತ ಭೀಮ್ಲಾ ದೇಕಾ ಎಂಬುವರು ಮತ್ತು ಅವರ ಪತ್ನಿ ಅನಿಮಾ ಹಾಗೂ ಮೂವರು ಮಕ್ಕಳಾದ ನರೇನ್, ದೀಪಾಲಿ ಮತ್ತು ಸುತಿ ಮಾತ್ರ ಬರ್ಧನರಾದಲ್ಲಿ ವಾಸಿಸುತ್ತಿದ್ದಾರೆ. ಈ ಹಳ್ಳಿಯು ನಲ್ಬರಿ ಜಿಲ್ಲಾ ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸದ್ಯಕ್ಕೆ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಮಳೆಯಿಂದಾಗಿ ಗ್ರಾಮದ ರಸ್ತೆಗಳು ಹಾಳಾಗಿ ಜಲಾವೃತಗೊಂಡಿವೆ. ದೋಣಿಯ ಸಹಾಯದಿಂದ ಗ್ರಾಮವನ್ನು ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಭೀಮ್ಲಾ ದೇಕಾ ತಮ್ಮ ಅಳಲು ತೋಡಿಕೊಂಡಿದ್ದಾರೆ.