ಮಧ್ಯಪ್ರದೇಶ :ಇಲ್ಲಿನ ಸತ್ನಾ ಪಟ್ಟಣದಲ್ಲಿ ಮಂಗಳವಾರ ಮಧ್ಯರಾತ್ರಿ ಸುಮಾರಿಗೆ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬಿಹಾರಿ ಚೌಕ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಹಾರಿ ಚೌಕ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ, ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿರುವ ಸಮಯದಲ್ಲಿ ಅವಘಡ ಸಂಭವಿಸಿದ್ದು, ಈ ವೇಳೆ ಕೆಲಸ ಮಾಡುತ್ತಿದ್ದ ಕೆಲ ಅಪರಿಚಿತ ವ್ಯಕ್ತಿಗಳು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ನಾದ ಶಾಸಕ (ವಿಧಾನಸಭಾ ಸದಸ್ಯ) ಸಿದ್ಧಾರ್ಥ್ ಕುಶ್ವಾಹ ಅವರು, "ನಮಗೆ ಬಂದಿರುವ ಮಾಹಿತಿಯ ಪ್ರಕಾರ ನವೀಕರಣ ಕಾರ್ಯ ನಡೆಯುತ್ತಿದ್ದಾಗ ಕಟ್ಟಡ ಕುಸಿದಿದೆ. ಎಷ್ಟು ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ, ಕುಸಿತದ ಕಾರಣದ ಬಗ್ಗೆ ಅಧಿಕಾರಿಗಳು ನಿರ್ದಿಷ್ಟ ಮಾಹಿತಿ ನೀಡಬೇಕಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ" ಎಂದು ಹೇಳಿದರು. (ಪಿಟಿಐ - ಎಎನ್ಐ)
ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿತ : ಕಳೆದ ತಿಂಗಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಪೂರ್ವದಲ್ಲಿ ಶಿಥಿಲಗೊಂಡಿದ್ದ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದರು. ಮಹಿಳೆಯೊಬ್ಬರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಐರೆ ಗ್ರಾಮದಲ್ಲಿರುವ 'ಆದಿನಾರಾಯಣ ಭವನ್' ಕಟ್ಟಡವು 44 ವಠಾರಗಳನ್ನು ಹೊಂದಿತ್ತು. 50 ವರ್ಷಗಳಷ್ಟು ಹಳೆಯ ಕಟ್ಟಡವನ್ನು ಅಪಾಯಕಾರಿ ಎಂದು ಘೋಷಿಸಲಾಗಿತ್ತು. ಹಾಗೂ ನಿವಾಸಿಗಳನ್ನು ತಕ್ಷಣ ತೆರವು ಮಾಡುವಂತೆ ನೋಟಿಸ್ ಕೂಡಾ ನೀಡಲಾಗಿತ್ತು. ನೋಟಿಸ್ ಬಂದ ತಕ್ಷಣ ಕೆಲವರು ಖಾಲಿ ಮಾಡಿದ್ದರು. ಇನ್ನೂ ಕೆಲವರು ಕಟ್ಟಡದಲ್ಲೇ ಉಳಿದಕೊಂಡಿದ್ದರು. ಈ ಪರಿಣಾಮ ದುರ್ಘಟನೆ ಸಂಭವಿಸಿತ್ತು.
ಇದನ್ನೂ ಓದಿ :ಶಿಥಿಲಗೊಂಡ ಕಟ್ಟಡ ಕುಸಿದು ಇಬ್ಬರ ಸಾವು.. ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಇನ್ನು ಕಳೆದ ಸೆಪ್ಟೆಂಬರ್ 4 ರಂದು ಫತೇಪುರ ಪಟ್ಟಣದ ಸತ್ತಿ ಮಾರುಕಟ್ಟೆಯಲ್ಲಿ 3 ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿತ್ತು. ವಿಷಯ ತಿಳಿದ ಕೂಡಲೇ ಸ್ಥಳೀಯರು ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು 12 ಜನರನ್ನು ರಕ್ಷಿಸಿದ್ದರು. ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದರು.
ಇದನ್ನೂ ಓದಿ :Building collapse : 3 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವು.. 12 ಮಂದಿ ರಕ್ಷಣೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ