ಜಾಖಂಡ್: ಜನರ ಮನಸ್ಸಿಗೆ ಸಮಾಧಾನ ತರುವ ಜಾಗ ದೇವಸ್ಥಾನ. ಈ ದೇವಸ್ಥಾನ ಮನದ ದುಗುಡ ಕಡಿಮೆ ಮಾಡುವ ಪವಿತ್ರ ತಾಣವೂ ಹೌದು. ದೇವಾಲಯ ಎಂದಾಕ್ಷಣ ಅಲ್ಲೊಂದು ದೇವರಿರಬೇಕು ನಿಜ. ಆದರೆ ಯಾವುದೇ ದೇವರಿರದ ದೇವಸ್ಥಾನದ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಹೌದು, ಈ ವಿಶಿಷ್ಟ ದೇವಾಲಯ ಇರುವುದು ಜಾರ್ಖಂಡ್ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಿಂದ 50 ಕಿ.ಮೀ. ದೂರದಲ್ಲಿರುವ ಬೋಡಮ್ ಬ್ಲಾಕ್‌ನಲ್ಲಿ. ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಇದನ್ನು ಹಾತಿ ಖೇಡಾ ಠಾಕೂರ್ ದೇವಸ್ಥಾನ ಎಂದು ಕರೆಯುತ್ತಾರೆ.
ಹಾತಿ ದೇವಾಲಯದಲ್ಲಿ ಆನೆಗಳನ್ನು ಪೂಜಿಸುವುದಿಲ್ಲ. ಆದರೆ ದೇವಾಲಯದ ಆವರಣದಲ್ಲಿ ಆನೆಗಳ ಅನೇಕ ಪ್ರತಿಮೆಗಳಿವೆ. ಇದರ ಹಿಂದೆ ಬಹಳ ಆಸಕ್ತಿದಾಯಕ ಕಥೆ ಇದೆ. ಹಳೆಯ ಕಾಲದಲ್ಲಿ ಈ ಪ್ರದೇಶದಲ್ಲಿ ಭಯಾನಕ ಆನೆಗಳಿದ್ದವು ಎಂದು ಹೇಳಲಾಗುತ್ತದೆ. ಡಾಲ್ಮಾ ಅರಣ್ಯಕ್ಕೆ ಹತ್ತಿರವಿರುವ ಕಾರಣ ಆನೆಗಳು ಹೆಚ್ಚಾಗಿ ಹೊಲ ಮತ್ತು ಹಳ್ಳಿಗಳಿಗೆ ಪ್ರವೇಶಿಸುತ್ತಿದ್ದವಂತೆ.
ಆನೆ ದಾಳಿಯಿಂದ ಕಂಗೆಟ್ಟು ‘ಹಾತಿ ಖೇಡಾ’ ಕಟ್ಟಿದ ಅರ್ಚಕ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಪುರೋಹಿತರು ಜೇಡಿಮಣ್ಣಿನಿಂದ ಮಾಡಿದ ಆನೆಗಳ ವಿಗ್ರಹವನ್ನು ಪೂಜಿಸಲು ಪ್ರಾರಂಭಿಸಿದರಂತೆ. ತದನಂತರ ಆನೆಗಳು ಬರುವುದನ್ನು ನಿಲ್ಲಿಸಿದವಂತೆ. ನಂತರ ಇಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು. ಬಳಿಕ ಈ ಸ್ಥಳ ಆನೆಯ ಹೆಸರಿನೊಂದಿಗೆ ಅಂಟಿಕೊಂಡು ಹಾತಿ ಖೇಡಾ ಎಂದೇ ಖ್ಯಾತಿ ಪಡೆಯಿತು.
ನಂತರ, ಈ ದೇವಾಲಯದ ಖ್ಯಾತಿಯು ಹಬ್ಬಲು ಪ್ರಾರಂಭಿಸಿತು. ಇತರ ರಾಜ್ಯಗಳ ಜನರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಚುನರಿ ಮತ್ತು ತೆಂಗಿನಕಾಯಿ ಕಟ್ಟಿ, ಕುರಿಗಳನ್ನು ಬಲಿ ನೀಡುವ ಸಂಪ್ರದಾಯ ಕೂಡ ಬೆಳೆಯಿತು. ವಿಶೇಷವೆಂದರೆ ಇಲ್ಲಿನ ಪ್ರಸಾದವನ್ನು ಮಹಿಳೆಯರು ಸೇವಿಸುವಂತಿಲ್ಲ.
ವಿಚಿತ್ರ ಎಂದರೆ ಈ ದೇವಾಲಯದ ಪ್ರಸಾದವನ್ನು ಮಹಿಳೆಯರು ಏಕೆ ತಿನ್ನಲು ಸಾಧ್ಯವಿಲ್ಲ ಎಂದು ಯಾರಿಗೂ ತಿಳಿದಿಲ್ಲ. ಹಾತಿ ಖೇಡಾ ದೇವಸ್ಥಾನದ ಬಗ್ಗೆ ಜನರಿಗೆ ಆಳವಾದ ನಂಬಿಕೆ ಇದೆ. ಮುಂಡನ್ ವಿಧಿಗಳಿಗಾಗಿ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಕಾಕತಾಳೀಯ ಎಂಬಂತೆ ಇಲ್ಲಿ ಆನೆ ಮೂರ್ತಿಗಳ ಪೂಜೆ ಬಳಿಕ ಗಜರಾಜನ ಹಾವಳಿ ನಿಂತಿದೆಯಂತೆ. ಅದೇನೆ ಇರಲಿ ಇಂತಹ ವಿಶೇಷ ದೇವಾಲಯ ಅನೇಕ ಜನರ ಬೇಡಿಕೆಗಳನ್ನು ಈಡೇರಿಸುತ್ತಿರುವುದು ಮಾತ್ರ ಅಚ್ಚರಿಯಾದರೂ ಸತ್ಯ.