ವಡೋದರ (ಗುಜರಾತ್): ಟ್ಯೂಷನ್ ಶಿಕ್ಷಕನೋರ್ವ 10ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿ, ಆಕೆಗೆ ಮದ್ಯ ಕುಡಿಸಿದ ಗಂಭೀರ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್ನ ವಡೋದರದಲ್ಲಿ ನಡೆದಿದೆ. ಪ್ರಶಾಂತ್ ಖೋಸ್ಲಾ ಎಂಬಾತನೇ ಬಂಧಿತ ಶಿಕ್ಷಕನಾಗಿದ್ದು, ಇಲ್ಲಿನ ನಜೀಮ್ಪುರ ಪ್ರದೇಶದಲ್ಲಿ ಟ್ಯೂಷನ್ ನಡೆಸುತ್ತಿದ್ದ.
ಬುಧವಾರ ಟ್ಯೂಷನ್ಗೆಂದು 10ನೇ ತರಗತಿ ವಿದ್ಯಾರ್ಥಿನಿ ಬಂದಿದ್ದಳು. ಈ ವೇಳೆ ಪ್ರಶಾಂತ್ ಖೋಸ್ಲಾ ಮದ್ಯ ಸೇವಿಸಿ, ವಿದ್ಯಾರ್ಥಿನಿಗೂ ಬಲವಂತದಿಂದ ಮದ್ಯ ಕುಡಿಸಿದ್ದಾನೆ. ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡ ನಂತರ ರಾತ್ರಿ 9.30ರ ಸುಮಾರಿಗೆ ತಾನೇ ಮನೆಯವರೆಗೆ ಕರೆತಂದು ಬಿಟ್ಟು ಹೋಗಿದ್ದಾನೆ. ಬಳಿಕ ಪೋಷಕರು ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಫತೇಹ್ಗಂಜ್ ಇನ್ಸ್‌ಪೆಕ್ಟರ್ ಕೆ.ಪಿ.ಪರ್ಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಗೆ ಪ್ರಜ್ಞೆ ಬಂದ ನಂತರ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎ.ಕೆ.ವಾಲ್ವಿ ಆಕೆಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಬಂಧನಕ್ಕೂ ಮುನ್ನ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಬಂಧಿತನ ವಿರುದ್ಧ ಮದ್ಯ ನಿಷೇಧ ಕಾಯ್ದೆ, ಬಾಲಾಪರಾಧಿ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದೂ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
2 ವರ್ಷದ ಮಗುವಿಗೆ ಮದ್ಯ ಕುಡಿಸಿದ ಜಮೀನುದಾರ: ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೀರಾ ಉದ್ಯೋಗನಗರ ಪ್ರದೇಶದಲ್ಲಿ ಜಮೀನುದಾರನೊಬ್ಬ ಪಕ್ಷದ ಮನೆಯ ಎರಡು ವರ್ಷದ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮರೆದಿದ್ದಾನೆ. ಅದೃಷ್ಟವಷಾತ್ ಮದ್ಯ ಕುಡಿಸುವ ಸಂದರ್ಭದಲ್ಲೇ ಪೋಷಕರು ನೋಡಿ ಮಗುವನ್ನು ಕರೆದೊಯ್ದಿದ್ದಾರೆ. ಆದರೆ, ಇದಾದ ಸ್ವಲ್ಪ ಹೊತ್ತಿನಲ್ಲಿ ಆ ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಪಾಲಕರು ಮಗುವನ್ನು ರಾಜ್ಕೋಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಇದನ್ನೂ ಓದಿ:ಬೆಂಗಳೂರು: ಬಿಲ್ಡಿಂಗ್ನಿಂದ ಕಂದಮ್ಮನನ್ನ ಕೆಳಕ್ಕೆ ಎಸೆದು ಹತ್ಯೆ ಮಾಡಿದ ತಾಯಿ!