ಜಗತ್‌ಸಿಂಗ್‌ಪುರ (ಒಡಿಶಾ):ಇಲ್ಲಿಯ ಪಾರಾದೀಪ್ ಕರಾವಳಿಯಲ್ಲಿ ಮೀನುಗಾರಿಕೆ ವೇಳೆ ಕ್ಯಾಮರಾ ಮತ್ತು ಮೈಕ್ರೋಚಿಪ್ ಅಳವಡಿಸಿರುವ ಪಾರಿವಾಳ ಪತ್ತೆಯಾಗಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಟ್ರಾಲರ್ ಮೇಲೆ ಈ ಪಾರಿವಾಳ ಬಂದು ಕೂತಿದ್ದು, ಕೂಡಲೇ ಅದನ್ನು ಸೆರೆ ಹಿಡಿದ ಮೀನುಗಾಗರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಜಗತ್‌ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಹೇಳಿದರು. ಸದ್ಯ ಪಾರಿವಾಳ ಕಾಲುಗಳಿಗೆ ಅಳವಡಿಸಲಾದ ಸಾಧನಗಳನ್ನು ಪರೀಕ್ಷಿಸಲು ನಾವು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯ ಪಡೆಯುತ್ತೇವೆ. ಪಕ್ಷಿಯ ಕಾಲಿಗೆ ಅಳವಡಿಸಿರುವ ಸಾಧನಗಳು ಕ್ಯಾಮರಾ ಮತ್ತು ಮೈಕ್ರೋಚಿಪ್ನಂತೆ ಗೋಚರಿಸುತ್ತಿವೆ. ಅಲ್ಲದೇ ಸೆರೆ ಹಿಡಿಯಲಾಗಿರುವ ಪಾರಿವಾಳ ರೆಕ್ಕೆಗಳ ಮೇಲೆ ತಿಳಿಯದ ಭಾಷೆಯಲ್ಲಿ ಏನನ್ನೋ ಬರೆಯಲಾಗಿದೆ. ತಜ್ಞರ ಸಹಾಯದಿಂದ ಅದನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಹೇಳಿದರು. ಗೂಢಚಾರಿಕೆಗಾಗಿ ಈ ಸಾಧನ ಬಳಸಿ ಪಾರಿವಾಳ ಬಿಡಲಾಗಿದೆ ಎಂದು ಶಂಕಿಸಲಾಗಿದೆ.
ಇನ್ನು ಸಾರಥಿ ಮೀನುಗಾರಿಕೆ ಟ್ರಾಲರ್ನ ಕೆಲಸಗಾರ ಪಿತಾಂಬರ್ ಬೆಹೆರಾ ಎಂಬುವವರು ಹೇಳುವ ಪ್ರಕಾರ, ಸುಮಾರು 10 ದಿನಗಳ ಹಿಂದೆ ಕೋನಾರ್ಕ್ ಕರಾವಳಿಯಿಂದ ಸುಮಾರು 35 ಕಿ.ಮೀ ದೂರದಲ್ಲಿ ಲಂಗರು ಹಾಕಲಾಗಿತ್ತು. ಈ ವೇಳೆ ಟ್ರಾಲರ್ ಮೇಲೆ ಪಾರಿವಾಳ ಬಂದು ಕೂತಿತ್ತು. ಅದರ ಕಾಲುಗಳಿಗೆ ಸಾಧನಗಳು ಅಳವಡಿಸಿರುವುದು ಕಂಡು ಬಂದಿತ್ತು. ಅಷ್ಟೇ ಅಲ್ಲದೇ ಅದರ ರೆಕ್ಕೆಗಳ ಮೇಲೆ ಯಾವುದೋ ಭಾಷೆಯಲ್ಲಿ ಏನನ್ನೋ ಬರೆಯಲಾಗಿತ್ತು. ಕೂಡಲೇ ಅದನ್ನು ಸೆರೆಹಿಡಿದಿದ್ದೇನೆ. ಪೊಲೀಸರಿಗೆ ಒಪ್ಪಿಸುವವರೆಗೂ ಅದಕ್ಕೆ ಆಹಾರ ಹಾಕಿ ಕೂಡಿಟ್ಟಿರುವುದಾಗಿ ಮಾಹಿತಿ ನೀಡಿದರು.
ಗುಜರಾತ್ನಲ್ಲೂ ಪತ್ತೆಯಾಗಿದ್ದ ಪಾರಿವಾಳ: ಈ ಹಿಂದೆ ಗುಜರಾತ್ನಲ್ಲೂ ಕಾಲಿಗೆ ಸಾಧನಗಳನ್ನು ಅಳವಡಿಸಿದ್ದ ಎರಡು ಪಾರಿವಾಳಗಳು ಪತ್ತೆಯಾಗಿದ್ದವು. ಪಕ್ಷಿಯ ಕಾಲಿಗೆ ಉಂಗುರ ಆಕಾರದ ಸಾಧನಗಳು ಅಳವಡಿಸಲಾಗಿತ್ತು. ಮೀನುಗಾರಿಕೆ ವೇಳೆ ಎರಡು ಪಾರಿವಾಳ ದೋಣಿ ಮೇಲೆ ಬಂದು ಕೂತ್ತಿದ್ದವು. ಅವುಗಳನ್ನು ಮೀನುಗಾರರು ಹಿಡಿದು ನಂತರ ಪೊಲೀಸರಿಗೆ ಒಪ್ಪಿಸಿದ್ದರು.