ನಲ್ಗೊಂಡ( ತೆಲಂಗಾಣ): ಮುನುಗೋಡು ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸಾರಾಯಿ ನದಿಯಂತೆ ಹರಿಯುತ್ತಿದೆ. ಪ್ರತಿದಿನ ಸಾವಿರಾರು ಕೋಳಿ ಮತ್ತು ಮೇಕೆಗಳನ್ನು ಕತ್ತರಿಸಿ ಬಾಡೂಟ ಏರ್ಪಡಿಸಲಾಗುತ್ತಿದೆ. ಕುಡುಕರು ನಶೆಯಲ್ಲಿ ತೇಲಾಡುತ್ತಿದ್ದರೆ, ಹಸಿದವರು ಹೊಟ್ಟೆ ತುಂಬಾ ಉಂಡು ತೇಗುತ್ತಿದ್ದಾರೆ.
ಅಬಕಾರಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಕ್ಷೇತ್ರದ ಏಳು ಮಂಡಲಗಳಲ್ಲಿ ಅಕ್ಟೋಬರ್ ತಿಂಗಳಿನ 22 ದಿನಗಳಲ್ಲಿ 160.8 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ತಿಂಗಳಾಂತ್ಯಕ್ಕೆ 230 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ. ಈ ಹಿಂದೆ ನಲ್ಗೊಂಡ ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 132 ಕೋಟಿ ರೂ.ಗಳ ಮದ್ಯ ಮಾರಾಟವಾಗುತ್ತಿತ್ತು. ಪ್ರಸ್ತುತ ಅದು ದ್ವಿಗುಣವಾಗುವ ಸಾಧ್ಯತೆಗಳಿವೆ.
ಅಬಕಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮುನುಗೋಡದಲ್ಲಿ ಅತಿ ಹೆಚ್ಚು ಹಾಗೂ ಗಟ್ಟುಪ್ಪಲಿಯಲ್ಲಿ ಅತಿ ಕಡಿಮೆ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ ಹೊರ ಪ್ರದೇಶಗಳಿಂದಲೂ ಮದ್ಯ ಬರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೈದರಾಬಾದ್, ಇಬ್ರಾಹಿಂಪಟ್ಟಣ, ದೇವರಕೊಂಡ ಸುತ್ತಮುತ್ತಲಿನ ಪ್ರದೇಶಗಳಿಂದ ಕ್ಷೇತ್ರದ ಬೆಲ್ಟ್ ಶಾಪ್‌ಗಳಿಗೆ ಮದ್ಯ ಪೂರೈಕೆಯಾಗುತ್ತಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಮೇಲಧಿಕಾರಿಗಳಿಗೂ ದೂರುಗಳು ಬರುತ್ತಿವೆ. ಚುನಾವಣಾ ವೀಕ್ಷಕರ ಆದೇಶದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿನಯ್ ಕೃಷ್ಣಾ ರೆಡ್ಡಿ ಮಂಗಳವಾರ ಮದ್ಯದಂಗಡಿಗಳಲ್ಲಿ ಪರಿಶೀಲನೆ ನಡೆಸಿದರು.
ಚಿಲ್ಲರೆ ನೋಟುಗಳಿಗೆ ಚೌಕಾಸಿ: ಪ್ರಚಾರದ ವೇಳೆ ಮುಖಂಡರು ಹಾಗೂ ವ್ಯಾಪಾರಿಗಳು ಸಣ್ಣ ನೋಟುಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ಪಕ್ಷಗಳು 500 ರೂಪಾಯಿ ನೋಟುಗಳ ಮೂಲಕ ಹಣ ಪಾವತಿ ಮಾಡುತ್ತಿರುವುದರಿಂದ ಚಿಲ್ಲರೆ ನೋಟುಗಳ ಕೊರತೆ ಎದುರಾಗಿದೆ. ಎಲ್ಲಿಯೂ ಸಣ್ಣ ನೋಟುಗಳು ಕಾಣುತ್ತಿಲ್ಲ. ಆದರೆ, ಡಿಜಿಟಲ್ ಪಾವತಿಗೆ ಮಾತ್ರ ಯಾವುದೇ ಪಕ್ಷಗಳು ಒಪ್ಪುತ್ತಿಲ್ಲ ಎನ್ನುತ್ತಾರೆ ನಾಂಪಲ್ಲಿಯ ದಿನಸಿ ವ್ಯಾಪಾರಿಯೊಬ್ಬರು.