ಹೈದರಾಬಾದ್(ತೆಲಂಗಾಣ):ಐಎಎಸ್ ಅಧಿಕಾರಿ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಅವರ ಮನೆಗೆ ಮಧ್ಯರಾತ್ರಿ ಆಗಂತುಕನೊಬ್ಬ ನುಗ್ಗಿದ ಘಟನೆ ನಡೆದಿದೆ. ಈ ಬಗ್ಗೆ ಮಹಿಳಾ ಅಧಿಕಾರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೊಂದು ಕರಾಳ ರಾತ್ರಿಯಾಗಿದ್ದು, ಸಮಯಪ್ರಜ್ಞೆಯಿಂದ ಬದುಕುಳಿದೆ ಎಂದು ತಿಳಿಸಿದ್ದಾರೆ. ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್ ಇದು ರಾಜ್ಯದ ಆಡಳಿತ ದುರವಸ್ಥೆ. ಮಹಿಳಾ ಐಎಎಸ್ ಅಧಿಕಾರಿಗೇ ರಕ್ಷಣೆ ಇಲ್ಲವಾದರೆ, ಮಹಿಳೆಯರಿಗೆ ರಕ್ಷಣೆ ಸಿಗುತ್ತಾ ಎಂದು ಪ್ರಶ್ನಿಸಿದೆ.
ಘಟನೆಯ ವಿವರ:ಎರಡು ದಿನಗಳ ಹಿಂದೆ ಇದು ಸಂಭವಿಸಿದೆ. ಉಪತಹಸೀಲ್ದಾರ್ ಆನಂದ್ರೆಡ್ಡಿ (48) ಎಂಬಾತ ಅಧಿಕಾರಣಿ ಸ್ಮಿತಾ ಅವರ ಮನೆಗೆ ಬಂದಿದ್ದಾನೆ. ಕಾವಲು ಸಿಬ್ಬಂದಿಗೆ ಅಧಿಕಾರಿಯನ್ನು ಭೇಟಿಯಾಗಬೇಕು ಎಂದು ಹೇಳಿ ಮನೆಯೊಳಗೆ ಬಂದಿದ್ದಾನೆ. ಮುಂಬಾಗಿಲು ಚಿಲಕ ಹಾಕದೇ ಇದ್ದ ಕಾರಣ ಆತ, ಸೀದಾ ಶಯನಗೃಹಕ್ಕೆ ಧಾವಿಸಿದ್ದಾನೆ. ಬಾಗಿಲು ಬಡಿದಾಗ ಆತಂಕದಿಂದಲೇ ಮಹಿಳಾ ಅಧಿಕಾರಿ ಯಾರೆಂದು ಕೇಳಿದ್ದಾರೆ. ತನ್ನನ್ನು ಉಪ ತಹಶೀಲ್ದಾರ್ ಎಂದು ಪರಿಚಯಿಸಿಕೊಂಡ ಆತ, ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾನೆ.
ರಾತ್ರಿ 11.30 ರ ಸುಮಾರಿಗೆ ವ್ಯಕ್ತಿಯೊಬ್ಬ ತಮ್ಮ ಮನೆಗೆ ಪೂರ್ವಾನುಮತಿ ಇಲ್ಲದೇ ನುಗ್ಗಿದ್ದು, ಆತಂಕ ಉಂಟು ಮಾಡಿದೆ. ಬಾಗಿಲು ತೆರೆದು ಅಧಿಕಾರಿ ಏರಿದ ಧ್ವನಿಯಲ್ಲೇ ಮಾತನಾಡಿದ್ದಾರೆ. ಯಾರು ನೀವು, ಇಲ್ಲಿಗ್ಯಾಕೆ ಬಂದಿರಿ ಎಂದು ಕೇಳಿದ್ದಾರೆ. ಆತ, ಸಬೂಬು ನೀಡಿದ್ದಾನೆ. ಇದರಿಂದ ಹೆದರಿದ ಅಧಿಕಾರಿ ಜೋರು ಧ್ವನಿಯಲ್ಲಿ ಕಿರುಚಿದಾಗ ಕಾವಲು ಸಿಬ್ಬಂದಿ ಓಡಿಬಂದು ಆತನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಅವರಿಗೆ ಒಪ್ಪಿಸಿದ್ದಾರೆ.