ಕಡಪ (ಆಂಧ್ರಪ್ರದೇಶ) : ಮಗನೋರ್ವ ತನ್ನ ತಂದೆಯ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ ರಸ್ತೆ ಬದಿಯ ಪೊದೆಗೆ ಎಸೆದು ಹೋಗಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ.
ದುವ್ವೂರು ಮಂಡಲದ ಸಿಂಗನಪಲ್ಲಿ ನಿವಾಸಿಯಾದ ರಾಜಶೇಖರ್ ರೆಡ್ಡಿ ಖಾಸಗಿ ಶಾಲಾ ಬಸ್ಸಿನ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಇವನ ತಂದೆ ಬೊಮ್ಮು ಚಿನ್ನಪುಲ್ಲಾ ರೆಡ್ಡಿ, ಕಳೆದ ಕೆಲವು ವರ್ಷಗಳಿಂದ ಕ್ಷಯ ರೋಗದಿಂದ ಬಳಲುತ್ತಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ರೋಗವು ಉಲ್ಬಣಗೊಂಡಿದ್ದು, ತನ್ನ ತಂದೆ ಚಿನ್ನಪುಲ್ಲಾ ರೆಡ್ಡಿಯನ್ನು ಕಡಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರಾಜಶೇಖರ್ ರೆಡ್ಡಿ ದಾಖಲಿಸಿದ್ದನು. ಬಳಿಕ ತನ್ನ ತಂದೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ತನ್ನ ಕೆಲಸದಲ್ಲಿ ನಿರತನಾಗಿದ್ದನು. ತಂದೆಯ ಸ್ಥಿತಿ ತುಂಬಾ ಗಂಭೀರವಾಗಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಾಜಶೇಖರ್ ರೆಡ್ಡಿಗೆ ಕರೆ ಮಾಡಿ ಹೇಳಿದ್ದರೂ ಆಸ್ಪತ್ರೆಗೆ ತೆರಳಿರಲಿಲ್ಲ ಎಂದು ತಿಳಿದುಬಂದಿದೆ.
ಫೆಬ್ರವರಿ 23ರಂದು ಆಸ್ಪತ್ರೆ ಸಿಬ್ಬಂದಿಗಳು ಮತ್ತೆ ರಾಜಶೇಖರ್ ರೆಡ್ಡಿಗೆ ಕರೆ ಮಾಡಿ ನಿನ್ನ ತಂದೆಯ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ. ರಾಜಶೇಖರ್ ರೆಡ್ಡಿ ಆಸ್ಪತ್ರೆಗೆ ಬಂದಿದ್ದು, ಚಿನ್ನಪುಲ್ಲಾ ರೆಡ್ಡಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ರಾಜಶೇಖರ್ ರೆಡ್ಡಿ ತಂದೆ ಚಿನ್ನಪುಲ್ಲಾ ರೆಡ್ಡಿಯ ಶವವನ್ನು ಆಸ್ಪತ್ರೆಯ ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದಾನೆ. ಬಳಿಕ ಒಂದು ರಿಕ್ಷಾದಲ್ಲಿ ಮೃತರ ಶವವನ್ನು ಸಾಗಿಸುವ ಮಾರ್ಗ ಮಧ್ಯೆ ಗುವ್ವಾಲ ಚೆರುವು ಘಾಟ್ ರಸ್ತೆ ಬಳಿಯ ಪೊದೆಯೊಂದರಲ್ಲಿ ಶವವನ್ನು ಎಸೆದು ಹೋಗಿದ್ದಾನೆ.
ಫೆಬ್ರವರಿ 29ರಂದು ಸ್ಥಳೀಯರು ಪೊದೆಯೊಂದರಲ್ಲಿ ಕೊಳೆತ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಪೊದೆಯಲ್ಲಿ ಕೊಳೆತಿರುವ ಶವ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶವದ ಮೇಲಿದ್ದ ಬಟ್ಟೆಯ ಮೂಲಕ ಆಸ್ಪತ್ರೆಯ ಗುರುತು ಪತ್ತೆಯಾಗಿದೆ. ಈ ಬಗ್ಗೆ ಸಂಬಂಧಿತ ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ತಕ್ಷಣ ಆರೋಪಿ ರಾಜಶೇಖರ್ ರೆಡ್ಡಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು, ಆರೋಪಿ ರಾಜಶೇಖರ್ ರೆಡ್ಡಿ ಅಂತ್ಯ ಸಂಸ್ಕಾರಕ್ಕೆ ಹಣ ಇಲ್ಲದೆ ಶವವನ್ನು ರಸ್ತೆ ಬದಿ ಎಸೆದಿರುವುದಾಗಿ ಹೇಳಿದ್ದಾನೆ ಎಂದು ಕಡಪ ಪೊಲೀಸ್ ಅಧಿಕಾರಿ ಎಂ.ಡಿ ಶರೀಫ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ವಾಮಾಚಾರದಲ್ಲಿ ತೊಡಗಿದ ಆರೋಪ: ವೃದ್ಧ ದಂಪತಿಗೆ ಥಳಿಸಿ ಕೊಲೆ