ಜಬಲ್ಪುರ (ಮಧ್ಯ ಪ್ರದೇಶ): ಇದೊಂದು ವಿಶೇಷವಾದ ಹಾಗೂ ವಿಭಿನ್ನವಾದ ರೆಸ್ಟೋರೆಂಟ್. ಇಲ್ಲಿ ಮಾತೇ ಇಲ್ಲ, ಬರೀ ಮೌನವೇ ಎಲ್ಲ. ಇಲ್ಲಿ ಸನ್ನೆಗಳ ಮೂಲಕ ಎಲ್ಲ ಕೆಲಸಗಳು ನಡೆಯುತ್ತವೆ. ಮಾತುಗಳಿಲ್ಲದೇ ಅಮೌಖಿಕ ಸಂವಹನವನ್ನೇ ಬಳಸಿಕೊಂಡು ನಡೆಯುತ್ತಿದೆ. ಈ ವಿಶಿಷ್ಟವಾದ ರೆಸ್ಟೋರೆಂಟ್. ಈ ರೆಸ್ಟೋರೆಂಟ್ ಇರುವುದು ಮಧ್ಯಪ್ರದೇಶದ ಜಬಲ್ಪುರದಲ್ಲಿ.
ಅಕ್ಷಯ್ ಸೋನಿ ಎನ್ನುವವರು ಈ ರೆಸ್ಟೋರೆಂಟ್ ಮಾಲೀಕ. ತಮ್ಮ ಮಾತು ಬಾರದ ಹಾಗೂ ಕಣ್ಣು ಕಾಣದ ಹೆತ್ತವರ ಗೌರವಾರ್ಥವಾಗಿ ಅಕ್ಷಯ್ ಸೋನಿ ಅವರು ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು. ಇನ್ನೊಂದು ವಿಶೇಷ ಎಂದರೆ ಈ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಲ್ಲ ಸಂಪೂರ್ಣವಾಗಿ ವಾಕ್ ಹಾಗೂ ಶ್ರವಣದೋಷವುಳ್ಳವರು. ಸಮಾಜದಲ್ಲಿ ಇತಿಹಾಸ ಕಾಲದಿಂದಲೂ ಅಂಚಿನಲ್ಲೇ ಉಳಿದಿರುವ ಇಂತಹವರ ಗೌರವ ಉತ್ತೇಜನಕ್ಕಾಗಿ ಅಕ್ಷಯ್ ಸೋನಿ ಅವರು ಈ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು.
ಕಣ್ಣು ಕಾಣದ ಹಾಗೂ ಮಾತು ಬಾರದ ರಾಕೇಶ್ ಸೋನಿ ಹಾಗೂ ಜಯವಂತಿ ಸೋನಿ ದಂಪತಿಗೆ ಹುಟ್ಟಿದವರು ಜಬಲ್ಪುರದ ಅಕ್ಷಯ್ ಸೋನಿ ಅವರು. ವಾಕ್ ಹಾಗೂ ಶ್ರವಣ ದೋಷ ಇರುವವರು ತಮ್ಮ ಜೀವನದ ಉದ್ದಕ್ಕೂ ಅನುಭವಿಸಿದ ಅಸಮಾನತೆ, ನೋವನ್ನು ನೋಡುತ್ತಾ ಬೆಳೆದವರು ಅವರು. ಹಾಗಾಗಿ ಇಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿ ಕೆಲವು ಸಮಯ ಕಾರ್ಪೋರೇಟ್ ವಲಯದಲ್ಲಿ ದುಡಿದ ನಂತರ ಅಕ್ಷಯ್ ಸೋನಿ ಅವರು ವಿಕಲಚೇತನ ಸಮುದಾಯವನ್ನು ಬೆಂಬಲಿಸುವ ಉದ್ದೇಶದಿಂದ ಸಂಸ್ಥೆಯೊಂದನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅಕ್ಷಯ್ ಅವರು ಕಿವುಡ ಸಮುದಾಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಮಹಾ ಕೌಶಲ್ ಕಿವುಡ ಸಂಘವನ್ನು ಆರಂಭಿಸಿದರು. ಆದರೆ, ಈಗ ಜಬಲ್ಪುರದ ಈ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ವಿಕಲಾಂಗಚೇತನರು ಆಶ್ರಯ ಪಡೆದಿದ್ದಾರೆ.
ರೆಸ್ಟೋರೆಂಟ್ ಶುರು ಮಾಡಿದ್ದು ಯಾಕೆ ಗೊತ್ತಾ?:ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅಕ್ಷಯ್ ಕುಮಾರ್
"ನಾನು ಬಾಲ್ಯದಿಂದಲೂ ನನ್ನ ಹೆತ್ತವರನ್ನು ನೋಡಿದ್ದೇನೆ. ಅವರ ನೋವು ನನಗೆ ಗೊತ್ತಿದೆ. ನನ್ನ ತಂದೆ ತುಂಬಾ ಪ್ರತಿಭಾವಂತರಾಗಿದ್ದರು. ಆದರೆ ಅವರ ಅಂಗವೈಕಲ್ಯ ಅವರನ್ನು ಸವಾಲುಗಳನ್ನು ಎದುರಿಸುವಂತೆ ಮಾಡಿತ್ತು. ಜನರು ಹೇಗೇ ಇರಲಿ, ಅವರು ಗೌರವಯುತ ಜೀವನ ನಡೆಸಬೇಕು ಎಂಬುದು ನನ್ನ ಬಯಕೆ. ಏಕೆಂದರೆ ಅವರೂ ಕೂಡ ಈ ಸಮಾಜದ ಭಾಗ, ಸಾಮಾನ್ಯ ಜನರಿಗಿಂತಲೂ ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಅವರಲ್ಲಿದೆ. ಹಾಗಾಗಿ ಅವರೊಳಗಿನ ಶಕ್ತಿಯ ಬಗ್ಗೆ ಅವರಿಗೇ ಅರಿವು ಮೂಡಿಸುವ ಉದ್ದೇಶದಿಂದ ನಾನು ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ" ಎಂದು ತಿಳಿಸಿದ್ದಾರೆ.
ಅಕ್ಷಯ್ ಅವರು ಈ ರೆಸ್ಟೋರೆಂಟ್ ಸ್ಥಾಪಿಸುವುದಕ್ಕೂ ಮುನ್ನ, ಕಿವಿ ಕೇಳದ ವ್ಯಕ್ತಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ಕೆಲಸವನ್ನೂ ಮಾಡಿದ್ದರು. ಆದರೆ ಅಲ್ಲಿ ಅವರಿಗಿರುವ ಸೀಮಿತ ಅವಕಾಶಗಳ ಬಗ್ಗೆ ಅಕ್ಷಯ್ ಅವರು ನಿರಾಶೆಗೊಂಡಿದ್ದರು. ಮಾತು ಬಾರದ ಹಾಗೂ ಕಿವಿ ಕೇಳದ ವ್ಯಕ್ತಿಗಳು ಗೌರವಯುತ ಕೆಲಸಗಳಿಗಾಗಿ ಹರಸಾಹಸ ಪಡಬೇಕಾಗಿತ್ತು. ಇದಲ್ಲದೇ ಅಕ್ಷಯ್ ಅವರ ತಂದೆ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಅವರ ಸುತ್ತಲಿನವರಿಂದ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಅಕ್ಷಯ್ ಅವರಿಗೆ ಅರಿವಿತ್ತು. ಈ ಅನುಭವಗಳು, ಹೊರ ಸಮಾಜದಲ್ಲಿ ವಿಕಲಾಂಗಚೇತನರು ಪಡುತ್ತಿರುವ ಕಷ್ಟಗಳು ಎರಡೂ ಅಕ್ಷಯ್ ಅವರು ಹೊಸ ಸಂಕಲ್ಪವೊಂದನ್ನು ಮಾಡುವಂತೆ ಮಾಡಿತ್ತು.