ಹೈದರಾಬಾದ್, ತೆಲಂಗಾಣ:ಅನಂತಪುರ ಟೊಮೆಟೊ ಮಾರುಕಟ್ಟೆಯಲ್ಲಿ ರೈತರಿಗೆ ದಾಖಲೆ ಬೆಲೆ ಸಿಕ್ಕಿದೆ. 15 ಕೆಜಿ ತೂಕದ ಟೊಮೆಟೊ ಬಾಕ್ಸ್ ಬೆಲೆ 3200 ರೂಪಾಯಿಗಳಾಗಿದ್ದು, ಇದು ಅಭೂತಪೂರ್ವವಾಗಿದೆ. ಮಳೆಯ ಅಭಾವ ಅಥವಾ ಅಕಾಲಿಕ ಮಳೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ರೈತರು ಈ ಬಾರಿ ದಾಖಲೆ ಬೆಲೆಯಿಂದ ಖುಷಿ ಪಡುತ್ತಿದ್ದಾರೆ. ಕೆಲವು ರೈತರಿಗೆ ನಿರೀಕ್ಷಿತ ಬೆಲೆಗಿಂತ ಶೇ 40ರಷ್ಟು ಹೆಚ್ಚು ಸಿಗುತ್ತಿದೆ. ಮಂಡಿಯಲ್ಲಿ ಕಡಿಮೆ ಗುಣಮಟ್ಟದ ಟೊಮೆಟೊ ಬಾಕ್ಸ್‌ಗೆ ಕನಿಷ್ಠ 1600, ಗರಿಷ್ಠ 3200 ರೂಪಾಯಿಯೊಂದಿಗೆ ದಾಖಲೆ ಬರೆದಿದೆ.
ನಾಲಿಗೆ ಸುಡುತ್ತಿರುವ ಟೊಮೆಟೊ: ಟೊಮೆಟೊ ಇಲ್ಲದೇ ಯಾವುದೇ ಖಾದ್ಯಕ್ಕೆ ರುಚಿ ಇರುವುದಿಲ್ಲ ಎಂಬುದು ಗೊತ್ತಿರುವ ವಿಚಾರ. ಟೊಮೆಟೊ ಅತ್ಯಂತ ಪ್ರಮುಖ ತರಕಾರಿ. ಆದರೆ, ಈ ಬೆಳೆ ಬೆಳೆದ ರೈತರು ಪ್ರತಿ ವರ್ಷ ಒಂದಲ್ಲ ಒಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಿದ್ದರು. ಕಟಾವು ಮಾಡುವ ಕೂಲಿಕಾರರು ಬಾರದೇ ಅರ್ಧ ರೂಪಾಯಿಗೆ, ಅರ್ಧ ಕಿಲೋಗೆ ಮಾರಿದ ರೈತನ ದಯನೀಯ ಸ್ಥಿತಿಯನ್ನು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಈ ವರ್ಷ ದೇಶಾದ್ಯಂತ ಉಂಟಾಗಿರುವ ಅತಿವೃಷ್ಟಿಯಿಂದ ಬೆಳೆ ವಿಳಂಬವಾಗಿರುವುದರಿಂದ ಈಗಾಗಲೇ ಬೆಳೆದ ಟೊಮೆಟೊ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ.
ಇಲ್ಲಿ ಬೆಳೆಯುವ ಟೊಮೆಟೋ ದೇಶಾದ್ಯಂತ ಉತ್ತಮ ಮನ್ನಣೆ ಮತ್ತು ಖ್ಯಾತಿಯನ್ನು ಹೊಂದಿದೆ. ರಾಯಲಸೀಮೆಯ ಅನಂತಪುರ, ಕರ್ನೂಲು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬಾರಿ ಮೇ ತಿಂಗಳಿನಿಂದ ಟೊಮೆಟೊ ಉತ್ಪಾದನೆ ಕಡಿಮೆಯಾಗಿದ್ದರಿಂದ ಬೆಲೆ ಏರಿಕೆಯಾಗತೊಡಗಿತು. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತಲುಪಿದ ಬೆಲೆಯೇ ದಾಖಲೆಯ ಬೆಲೆ ಎಂದು ಮಾರುಕಟ್ಟೆಯ ಮೂಲಗಳು ಭಾವಿಸಿದಾಗ ಮಂಗಳವಾರ ಅನಂತಪುರ ಮಂಡಿಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ 3200 ರೂ.ಗೆ ಮಾರಾಟವಾಗಿದೆ. ಇಷ್ಟೊಂದು ಬೆಲೆಯನ್ನು ನಿರೀಕ್ಷಿಸಿರಲಿಲ್ಲ ಎಂದು ರೈತ ಸಂತಸ ವ್ಯಕ್ತಪಡಿಸಿದ್ದಾರೆ.