ಕರ್ನಾಟಕ

karnataka

ETV Bharat / bharat

ಹೈದರಾಬಾದ್​ನ ಕಿರೀಟಕ್ಕೆ ಇನ್ನೊಂದು ವಿಶಿಷ್ಟ ಗರಿಯ ಸೊಬಗು! - ಹೈದರಾಬಾದ್​ನ ಕಿರೀಟಕ್ಕೆ ಇನ್ನೊಂದು ವಿಶಿಷ್ಟ ಗರಿಯ ಸೊಬಗು

ವಿಶ್ವದ ಅತ್ಯಂತ ಕ್ರಿಯಾತ್ಮಕ - ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆ ಹೊಂದಲು ಪ್ರಯತ್ನಿಸುತ್ತಿರುವ ಮುತ್ತಿನ ನಗರಿ ಹೈದರಾಬಾದ್​ ಈಗ 'ವಿಶ್ವದ ಮರಗಳ ನಗರ' ಎಂಬ ಅಭಿದಾನಕ್ಕೆ ಪಾತ್ರವಾಗಿದೆ.

A rare 'green' jewel in Hyderabad's crown
ಹೈದರಾಬಾದ್​ನ ಕಿರೀಟಕ್ಕೆ ಇನ್ನೊಂದು ವಿಶಿಷ್ಟ ಗರಿಯ ಸೊಬಗು

By

Published : Feb 23, 2021, 12:01 PM IST

ಹೈದರಾಬಾದ್ ಎಂದ ಕೂಡಲೇ ನಮ್ಮ ಕಣ್ಮುಂದೆ ಸುಳಿಯುವುದು ಅಲ್ಲಿನ ಮುತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಶಕ್ತಿಯಾಗಿರುವ ಈ ನಗರದ ಕಿರೀಟಕ್ಕೆ ಈಗ ಇನ್ನೊಂದು ವಿಶಿಷ್ಟ ಗರಿ ಸೇರ್ಪಡೆಗೊಂಡಿದೆ.

ವಿಶ್ವದ ಅತ್ಯಂತ ಕ್ರಿಯಾತ್ಮಕ - ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆ ಹೊಂದಲು ಪ್ರಯತ್ನಿಸುತ್ತಿರುವ ಈ ನಗರಕ್ಕೆ ಈಗ 'ವಿಶ್ವದ ಮರಗಳ ನಗರ' ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ವಿಶ್ವದಾದ್ಯಂತ ಗಿಡ ಮರಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಶ್ವ ಸಂಸ್ಥೆಯ ಜೊತೆಗೆ ಕೈ ಸೇರಿಸಿ ಕೆಲಸ ಮಾಡುತ್ತಿರುವ ಆರ್ಬರ್ ಡೇ ಫೌಂಡೇಶನ್ ನಗರವನ್ನು 2020 ‘ಟ್ರೀ ಸಿಟಿ’ ಎಂದು ಘೋಷಿಸಿದೆ.

ಈ ಮಾನ್ಯತೆ, ಹೆಗ್ಗಳಿಕೆ, ನಗರದಲ್ಲಿ “ಕೋಟಿ ವೃಕ್ಷರ್ಚನ” ಕಾರ್ಯಕ್ರಮ ಪ್ರಾರಂಭವಾದ ಮರು ದಿನವೇ ಲಭಿಸಿದೆ. “ಕೋಟಿ ವೃಕ್ಷರ್ಚನ” ಅಂದರೆ, ಒಂದು ಕೋಟಿ ಮರಗಳ ಆರಾಧನೆ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಅವರ ಜನ್ಮದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಆರಂಭಿಸಲಾಯಿತು. ಈ ಹೆಗ್ಗಳಿಕೆಗೆ ಪಾತ್ರವಾದ ದೇಶದ ಏಕೈಕ ನಗರವೆಂದರೆ ಹೈದರಾಬಾದ್. ಇದು ಹಸಿರು ಪ್ರಿಯರಲ್ಲಿ ಸಂತಸದ ಹೊನಲು ಹರಿಸಿದೆ.

ತೆಲಂಗಾಣ ರಾಜ್ಯಕ್ಕೆ ಹಸಿರು ಹೊದಿಸುವ ಕನಸಿನ ನಿಮಿತ್ತ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜುಲೈ, 2017ರಲ್ಲಿ ಗ್ರೀನ್ ಇಂಡಿಯಾ ಸವಾಲನ್ನು ಅರಂಭಿಸಿದ್ದರು. ಇದು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲೂ ಇದೇ ತೆರನಾದ ಉತ್ಸಾಹ ಕಂಡು ಬಂದಿದೆ. “ಹರಿತಾ ಹರಮ್” (ಹಸಿರು ಮಾಲೆ- ಹಸಿರ ಹೊದಿಕೆ ) ಮತ್ತು ಕೋಟಿ ವೃಕ್ಷರ್ಚನ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮಗಳು.

ಈ ನಿಟ್ಟಿನಲ್ಲಿ ಸ್ವಾಗತಾರ್ಹ ಬೆಳವಣಿಗೆ ಎಂದರೆ ಈ ಕಾರ್ಯಕ್ರಮಗಳಿಗೆ ಸಿಕ್ಕಿರುವ ಜನ ಬೆಂಬಲ. ಚಲನಚಿತ್ರ ನಟರಿಂದ ಹಿಡಿದು ಸಮಾಜದ ಪ್ರಮುಖ ವ್ಯಕ್ತಿಗಳವರೆಗೆ ಜನ ಜೀವನದ ನಾನಾ ರಂಗಗಳಲ್ಲಿ ಕ್ರಿಯಾಶೀಲವಾಗಿರುವ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು. ಇದು ಜನ ಸಾಮಾನ್ಯರಲ್ಲಿ ಕೂಡ ಹಸಿರಿನ ಮಹತ್ವವನ್ನು ಸಾರುತ್ತಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡಬೇಕಾದರೆ ರಾಜಕೀಯ ಹಾಗೂ ವೈಯಕ್ತಿಕ ನೆಲೆಗಳನ್ನು ಮೀರಿದ ಪ್ರಯತ್ನ ಬೇಕಿದೆ. ಇಂತಹ ಯಾವುದೇ ಪ್ರಯತ್ನ ಒಂದು ಸಂಕುಚಿತ ರಾಜಕೀಯ ಕಾರ್ಯಸೂಚಿಯ ಭಾಗವಾಗಲು ಸಾಧ್ಯವಿಲ್ಲ. ಇದು ಯಜ್ಞದ ರೂಪದಲ್ಲಿ ತೆಗೆದುಕೊಂಡು ಹೋದಾಗಲಷ್ಟೇ ಯಶಸ್ವಿಯಾಗಲು ಸಾಧ್ಯ.

ಇಂತಹ ದೊಡ್ಡ ಪ್ರಯತ್ನ ರಾಜ್ಯದ ದೀರ್ಘಕಾಲೀನ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಸಾರ್ವಜನಿಕ ಆರೋಗ್ಯವನ್ನು ಉತ್ತಮಗೊಳಿಸಲು ಅನಿವಾರ್ಯ. ಪರಿಸರ ಸಮತೋಲನ ಸಾಧಿಸಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಸಿಗಳು ಯಾವುದೇ ಸಮಸ್ಯೆಯಿಲ್ಲದೆ ದೊಡ್ಡ ಮರಗಳಾಗಿ ಬೆಳೆದು ನಿಲ್ಲಲು ಸೂಕ್ತವಾದ ಹಾಗೂ ವಿವೇಚನೆಯಿಲ್ಲದೆ ಮರಗಳನ್ನು ಕಡಿಯುವುದನ್ನು ತಡೆಯುವ ನೀತಿಗಳು ಈ ಕ್ಷಣದ ಅನಿವಾರ್ಯತೆ. ಇಂತಹ ನೀತಿಯೊಂದು ಮಾತ್ರ ನಮ್ಮ ಪರಿಸರದಲ್ಲಿ ಹಸಿರ ಹೊದಿಕೆಯ ಅಂಶವನ್ನು ಹೆಚ್ಚಿಸಬಹುದಾಗಿದ್ದು, ಈ ನೀತಿಯನ್ನು ಎಲ್ಲರು ಪಾಲಿಸಬೇಕಿದೆ.

ಮುತ್ತಿನ ನಗರಿ ಹೈದರಾಬಾದ್ ನಗರಕ್ಕೆ ದೊರೆತ ಈ ಅಪರೂಪದ ಅಂತರರಾಷ್ಟ್ರೀಯ ಮಾನ್ಯತೆ ದೇಶದ ಎಲ್ಲ ಪಟ್ಟಣಗಳು ಮತ್ತು ನಗರಗಳ ನಡುವೆ ಒಂದು ಆರೋಗ್ಯಕರ ಹಸಿರು ಸ್ಪರ್ಧೆಗೆ ಪೂರಕವಾಗಬೇಕು. ಇದು ಮಾತ್ರ ನಮ್ಮ ದೇಶವನ್ನು ಹಸಿರಾಗಿಸಬಹುದು. ಇಂತಹ ಪ್ರಯತ್ನವೊಂದರ ಯಶಸ್ವಿಗೆ ಅತಿ ಅಗತ್ಯವಾಗಿ ಬೇಕಾಗಿರುವುದು ನಾಗರಿಕ ಸಮಾಜದ ಸಕ್ರಿಯ ಭಾಗವಹಿಸುವಿಕೆ. ಹೈದರಾಬಾದ್​ನಲ್ಲಿ ಇದು ಸಾಧ್ಯವಾಗಿದೆ. ಇದಕ್ಕೆ ಕಾರಣವೆಂದರೆ, ಕಳೆದ ಹಲವಾರು ವರ್ಷಗಳಿಂದ, ಪರಿಸರವಾದಿಗಳು ನಗರದಲ್ಲಿ ಪರಿಸರ ಸಂರಕ್ಷಣೆಯ ಮನೋಭಾವನೆ ಬಿತ್ತಲು ಒತ್ತು ನೀಡುತ್ತಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಹಸಿರೀಕರಣದ ಜಾಗೃತಿಯನ್ನು ಅವರು ನಿರಂತರವಾಗಿ ಮೂಡಿಸುತ್ತಿದ್ದಾರೆ.

ಪರಿಸರದೆಡೆಗಿನ ನಮ್ಮ ನಿರ್ಲಕ್ಷ್ಯ ಮನೋಭಾವದಿಂದಾಗಿ ಮಾಲಿನ್ಯದ ರಾಕ್ಷಸ ತನ್ನ ಕೋರೆಹಲ್ಲುಗಳನ್ನು ಈಗ ಎಲ್ಲೆಡೆ ತೋರಿಸುತ್ತಿದ್ದಾನೆ. ಪರಿಸರ ಮಾಲಿನ್ಯ ಎಲ್ಲ ಭಾಗಗಳಲ್ಲಿ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆಗಿನ ಪರಿಸರವಾದಿಗಳ ಎಚ್ಚರಿಕೆಗಳ ಎಚ್ಚರಿಕೆ ಈಗ ನಿಜವಾಗುತ್ತಿದೆ. ಸಂಘಟಿತ ಪ್ರಯತ್ನವೊಂದು ಈ ನಿಟ್ಟಿನಲ್ಲಿ ಈಗಿನ ಅನಿವಾರ್ಯ.

ವಿಶ್ವದ ಪ್ರತಿಷ್ಠಿತ ಗ್ರೀನ್ ಪೀಸ್ ಎಂಬ ಆಗ್ನೇಯ ಏಷ್ಯಾದ ಸಂಸ್ಥೆಯೊಂದು ನಡೆಸಿದ ಅಧ್ಯಯನವೊಂದು ಪರಿಸರ ಮಾಲಿನ್ಯ ನಮ್ಮ ಮುಂದಿಟ್ಟಿರುವ ಸವಾಲುಗಳಿಗೆ ಕನ್ನಡಿ ಹಿಡಿದಿದೆ. ಈ ಅಧ್ಯಯನದ ಪ್ರಕಾರ, ಮಾಲಿನ್ಯಕಾರಿ ಕಣಗಳಿಂದ ಉಂಟಾಗುವ ವಾಯುಮಾಲಿನ್ಯದಿಂದಾಗಿ 1.2 ಲಕ್ಷ ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಈ ಸಾವುಗಳು, ದೇಶದ ರಾಜಧಾನಿ ದೆಹಲಿ ಹಾಗೂ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಲಖನೌಗಳಿಂದ ವರದಿಯಾಗಿದೆ.

ಈ ಸಂಸ್ಥೆಯ ಅಂದಾಜಿನ ಪ್ರಕಾರ ಮಾಲಿನ್ಯ ತಂದಿಟ್ಟಿರುವ ಆರೋಗ್ಯ ಸಮಸ್ಯೆಗಳಿಗಾಗಿ ಈ ನಗರಗಳ ಜನತೆ ಈವರೆಗೆ 1.3 ಲಕ್ಷ ಕೋಟಿ ರೂಪಾಯಿಗಳನ್ನು ವೈದ್ಯಕೀಯ ವೆಚ್ಚವಾಗಿ ಖರ್ಚು ಮಾಡಿದ್ದಾರೆ. ಈ 6 ನಗರಗಳಲ್ಲಿನ ಮಾಲಿನ್ಯದಿಂದ ಉಂಟಾಗುತ್ತಿರುವ ರೋಗಗಳ ವೆಚ್ಚ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿವೆ. ಇದು ಭಾರತದ ನಗರಗಳ ಸಮಸ್ಯೆ ಮಾತ್ರವಲ್ಲ. ಪರಿಸರ ಮಾಲಿನ್ಯವು ವಿಶ್ವದ ಎಲ್ಲಾ ದೇಶಗಳ ಮೇಲೆ ತೀವ್ರ ತೆರನಾದ ಪರಿಣಾಮ ಬೀರುತ್ತಿದೆ. ಆದರೆ ಭಾರತ ಪರಿಸರ ಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವ 67 ಪ್ರಮುಖ ದೇಶಗಳಲ್ಲಿ ಒಂದು ಎನ್ನುವ ಅಭಿದಾನಕ್ಕೆ ಪಾತ್ರವಾಗಿದೆ.

ಪರಿಸರ ಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವ ದೇಶಗಳಲ್ಲೊಂದಾದ ಚೀನಾ ಈಗ ದೊಡ್ಡ ಮಟ್ಟದಲ್ಲಿ ಕಾಡು ಬೆಳೆಸಲು ಮುಂದಾಗಿದೆ. ಇದರ ಪರಿಣಾಮ ಅದು ವಾರ್ಷಿಕವಾಗಿ 25 ಟನ್​ಗಳಷ್ಟು ಇಂಗಾಲದ ಡೈ ಆಕ್ಸೈಡ್ ನಾಶಗೊಳಿಸಲು ಸಾಧ್ಯವಾಗಿದೆ. ಇದರ ಜೊತೆಗೆ ಪ್ರತಿದಿನ 60 ಕಿಲೋ ಆಮ್ಲಜನಕವನ್ನು ಇಲ್ಲಿ ನೆಟ್ಟಿರುವ ಮರಗಳು ಹೊರಸೂಸುತ್ತವೆ. ಚೀನಾದ ಅರಣ್ಯೀಕರಣ ಕಾರ್ಯಕ್ರಮವು ಪರಿಸರ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ, ಅತ್ಯುತ್ತಮ ಫಲಿತಾಂಶಗಳನ್ನು ಇಂದು ನೀಡುತ್ತಿದೆ.

ಲ್ಯಾಟಿನ್ ಅಮೇರಿಕಾದ ಕೋಸ್ಟರಿಕಾ ತನ್ನ ಭೌಗೋಳಿಕ ಪ್ರದೇಶದ 21 ಪ್ರತಿ ಶತದಿಂದ ಶೇ.52ಕ್ಕೆ ಹಸಿರು ಹೊದಿಕೆಯನ್ನು ಹೆಚ್ಚಿಸಿದೆ. ಇದೇ ರೀತಿ ಬ್ರೆಜಿಲ್ ತನ್ನ ಭೌಗೋಳಿಕ ಹಸಿರು ಹೊದಿಕೆಯನ್ನು 60 ಪ್ರತಿ ಶತಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಈ ದೇಶಗಳು ಪರಿಸರ ಸಂರಕ್ಷಣೆಯಲ್ಲಿ ಭಾರೀ ಪ್ರಗತಿ ಸಾಧಿಸುತ್ತಿವೆ. ಈ ಪ್ರಗತಿಯ ಹಿಂದಿರುವುದು, ಮರಗಳನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಆ ದೇಶಗಳಲ್ಲಿ ತೆಗೆದುಕೊಳ್ಳಲಾದ ಸಾಮೂಹಿಕ ಪ್ರಯತ್ನಗಳು. ಮರಗಳು ಪರಿಸರ ತಾಪಮಾನವನ್ನು ಸಮತೋಲನಗೊಳಿಸುತ್ತವೆ ಮತ್ತು ನೀರಿನ ಹರಿವನ್ನು ನಿಯಂತ್ರಿಸುತ್ತವೆ. ವೃಕ್ಷಗಳು ಮಾನವಕುಲದ ಆರೋಗ್ಯಕರ ಭವಿಷ್ಯದ ಮೆಟ್ಟಿಲುಗಳು.

ಈ ಹಿನ್ನೆಲೆಯಲ್ಲಿ, ನೀತಿ ಆಯೋಗದ ಸಾಮಾಜಿಕ ಅರಣ್ಯ ಯೋಜನೆ ಹಾಗೂ ಹಸಿರು ಭಾರತವನ್ನು ಅನಾವರಣಗೊಳಿಸುವ ಕೇಂದ್ರ ಸರ್ಕಾರದ ಸಂಕಲ್ಪಗಳು ಕೇವಲ ಕಾಗದಕ್ಕೆ ಮೀಸಲಾಗಬಾರದು. ಇದೊಂದು ಪವಿತ್ರ ಆಂದೋಲನ. ದೇಶದ ಹಸಿರ ಹೊದಿಕೆ ಹೆಚ್ಚಿಸುವುದು ಮನುಕುಲ ರಕ್ಷಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ನ ಈ ಸಾಧನೆ ಮಹತ್ವವಾದದ್ದು. ಹಸಿರು ಭಾರತದ ಸಾಕ್ಷಾತ್ಕಾರದ ಕಡೆಗೆ ದೇಶದ ಎಲ್ಲ ಪಟ್ಟಣಗಳು ಮತ್ತು ನಗರಗಳು ಹೆಜ್ಜೆ ಇಡಲು ಈ ಸಾಧನೆ ಪ್ರೇರಣೆಯಾಗಬೇಕು.

ABOUT THE AUTHOR

...view details