ಮಹಾರಾಷ್ಟ್ರ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿ ಕಲ್ಲು ತೂರಾಟ ನಡೆಸಿರುವ ಪ್ರಕರಣ ಮಧ್ಯೆಯೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾಗ್ಪುರದ ಮನೆ ಮುಂದೆ ಬಾಂಬ್ ಇಡುವುದಾಗಿ ಫೋನ್ ಕರೆಯೊಂದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಎರಡು ಗಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ದೊರೆತಿರುವ ಮಾಹಿತಿಯ ಪ್ರಕಾರ, ಮಧ್ಯರಾತ್ರಿ 2 ಗಂಟೆಗೆ ವ್ಯಕ್ತಿಯೊಬ್ಬರು ನಾಗ್ಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ದೇವೇಂದ್ರ ಫಡ್ನವೀಸ್ ಅವರ ಮನೆಯ ಹೊರಗೆ ಬಾಂಬ್ ಇಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದರು. ಆ ಬಳಿಕ ಪೊಲೀಸರು ತಕ್ಷಣ ಬಾಂಬ್ ಸ್ಕ್ವಾಡ್ ಅನ್ನು ಫಡ್ನವೀಸ್ ಮನೆಗೆ ಕರೆದೊಯ್ದು ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕರೆ ಮಾಡಿದವನನ್ನೂ ಬಂಧಿಸಲಾಗಿದೆ. ಕರೆ ಮಾಡಿದವರು ನಾಗ್ಪುರದ ಕನ್ಹಾನ್ ಪ್ರದೇಶದ ನಿವಾಸಿಯಾಗಿದ್ದಾರೆ. ಅವರ ಮನೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಕರೆ ಮಾಡಿ ಕೋಪದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ನಿತಿನ್ ಗಡ್ಕರಿಗೂ ಬೆದರಿಕೆ ಕರೆ:ಇತ್ತೀಚೆಗೆಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಹಾಗೂ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದ ಬೆಳಗಾವಿಯ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.