ಕರ್ನಾಟಕ

karnataka

ETV Bharat / bharat

ಟಿಆರ್​ಎಸ್​ನ ನಾಲ್ವರು ಶಾಸಕರ ಖರೀದಿ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್​ ನೇತೃತ್ವದ ಟಿಆರ್​ಎಸ್​ ಪಕ್ಷದ ಶಾಸಕರ ಕುದುರೆ ವ್ಯಾಪಾರದ ಯತ್ನದ ಸಂಬಂಧ ಹೈದರಾಬಾದ್​ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

a-party-agents-held-with-cash-trying-to-buy-trs-mlas-in-hyderabad
ಟಿಆರ್​ಎಸ್​ನ ನಾಲ್ವರು ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ

By

Published : Oct 26, 2022, 10:49 PM IST

Updated : Oct 26, 2022, 11:01 PM IST

ಹೈದರಾಬಾದ್​ (ತೆಲಂಗಾಣ): ಮುನಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲೇ ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷದ ನಾಲ್ವರು ಶಾಸಕರ ಕುದುರೆ ವ್ಯಾಪಾರ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಸಂಚಲನ ಮೂಡಿಸಿದೆ.

ಶಾಸಕರ ಕುದುರೆ ವ್ಯಾಪಾರ ಯತ್ನದ ಸಂಬಂಧ ಹೈದರಾಬಾದ್​ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಇವರನ್ನು ದೆಹಲಿ, ತಿರುಪತಿ ಮತ್ತು ಹೈದರಾಬಾದ್‌ ಮೂಲದ ಏಜೆಂಟ್​ಗಳೆಂದು ಗುರುತಿಸಲಾದ್ದು, ಕೋಟ್ಯಂತರ ನೋಟುಗಳ ಬಂಡಲ್​ಗಳೊಂದಿಗೆ ಬಂಧಿಸಲಾಗಿದೆ.

ಅಚ್ಚಂಪೇಟೆ ಶಾಸಕ ಗುವ್ವಾಲ ಬಾಲರಾಜು, ಕೊಲ್ಲಾಪುರ ಶಾಸಕ ಬೀರಂ ಹರ್ಷವರ್ಧನ್ ರೆಡ್ಡಿ, ಪಿಣಪಾಕ ಶಾಸಕ ರೇಗಾ ಕಾಂತರಾವ್ ಹಾಗೂ ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರನ್ನು ಪಕ್ಷಾಂತರ ಮಾಡುವಂತೆ ದೆಹಲಿಯ ಜನರು ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಈ ನಾಲ್ವರು ಶಾಸಕರ ಖರೀದಿಗೆ ಪ್ರಯತ್ನಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ನಿಖರ ಮಾಹಿತಿಯೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿ, ಮೊಯಿನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಅಜೀಜ್ ನಗರದ ತೋಟದ ಮನೆಯಲ್ಲಿ ಚೌಕಾಸಿ ನಡೆಸುತ್ತಿದ್ದಾಗ ದಾಳಿ ನಡೆಸಿ ಹಣದ ಸಮೇತ ಹಿಡಿದಿದ್ದಾರೆ.

ನೋಟುಗಳ ಬಂಡಾಲ್​ಗಳೊಂದಿಗೆ ಸಿಕ್ಕಿಬಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಕ್ಷಾಂತರಕ್ಕೆ ಪ್ರೋತ್ಸಾಹಿಸಿದವರು ಯಾರು?. ಹಣ ಕೊಟ್ಟವರು ಯಾರು? ಇದರಲ್ಲಿ ಮಾಸ್ಟರ್ ಮೈಂಡ್ ಯಾರು? ಎಂಬುದನ್ನು ಪತ್ತೆ ಹೆಚ್ಚಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

'ಬಿಜೆಪಿಯಿಂದ 100 ಕೋಟಿ ಹಣ ಮತ್ತು ಗುತ್ತಿಗೆ ಆಮಿಷ': ಈ ಬಗ್ಗೆ ಟಿಆರ್​ಎಸ್​ ಶಾಸಕ ಬಲ್ಕಾ ಸುಮನ್​ ಮಾತನಾಡಿ, ದೊಡ್ಡ ಮಟ್ಟದ ಹಣ ಹಾಗೂ ಗುತ್ತಿಗೆ ಆಮಿಷವೊಡ್ಡಿ ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ. ನಗರಶಿವರು ಎಂಬ ಫಾರ್ಮ್​ಹೌಸ್​ನಲ್ಲಿ ನಾಲ್ವರನ್ನು ವಶಕ್ಕೆ ಪಡೆದ ಬಳಿಕ ಅವರು ಮಾಧ್ಯಮದ ಜತೆ ಮಾತನಾಡಿದರು.

ಟಿಆರ್​ಎಸ್​ ಪಕ್ಷದ ಪ್ರತಿ ಶಾಸಕರಿಗೆ ತಲಾ 100 ಕೋಟಿ ರೂ. ಹಣ ಮತ್ತು ಗುತ್ತಿಗೆ ಆಮಿಷವೊಡ್ಡಿದ್ದಾರೆ. ಬಿಜೆಪಿ ನಾಯಕರು ಖರೀದಿಗೆ ಯತ್ನಿಸಿದಾಗ ನಮ್ಮ ಶಾಸಕರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಮೂಲಕ ತೆಲಂಗಾಣ ಸಮಾಜವು ಮಾರಾಟಕ್ಕಿಲ್ಲ ಎಂಬುವುದನ್ನು ಬಿಜೆಪಿ ಮನಗಾಣಬೇಕು. ಬಿಜೆಪಿಯು ಕರ್ನಾಟಕ, ಮಹಾರಾಷ್ಟ್ರ, ದೆಹಲಿಯಲ್ಲಿ ಈ ರೀತಿಯ ಹಲವು ಕುತಂತ್ರಗಳನ್ನು ನಡೆಸಿದೆ. ನಾವು ತೆಲಂಗಾಣದ ಮಕ್ಕಳು, ಕೆಸಿಆರ್​ ನಾಯಕತ್ವದಲ್ಲೇ ಮುನ್ನಡೆಯುವೆವು. ಮುನಗೋಡು ಕ್ಷೇತ್ರವನ್ನು ಕಳೆದುಕೊಳ್ಳುವ ಭಯದಲ್ಲಿ ಬಿಜೆಪಿಯವರು ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ:47 ನಾಯಕರ ಉನ್ನತ ಸಮಿತಿ ರಚಿಸಿದ ಖರ್ಗೆ: ಕರ್ನಾಟಕದ ಮೂವರಿಗೆ ಅವಕಾಶ, ತರೂರ್​ಗಿಲ್ಲ ಸ್ಥಾನ

Last Updated : Oct 26, 2022, 11:01 PM IST

ABOUT THE AUTHOR

...view details