ಕರ್ನಾಟಕ

karnataka

ETV Bharat / bharat

Helicopter Tragedy: ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದವರ ಗ್ರಾಮಗಳಲ್ಲಿ ಕತ್ತಲೆ ಕವಿದ ವಾತಾವರಣ

ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಜೊತೆ ಮೃತಪಟ್ಟ ಯೋಧರ ಗ್ರಾಮಗಳಲ್ಲಿ ಶೋಕ ಮಡುಗಟ್ಟಿದೆ. ಇವರೆಲ್ಲರೂ ತಮ್ಮ ಪೋಷಕರು, ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಹೆಲಿಕಾಪ್ಟರ್ ದುರಂತ
Helicopter Tragedy

By

Published : Dec 9, 2021, 3:21 PM IST

ಹೈದರಾಬಾದ್​:ನಿನ್ನೆ ತಮಿಳುನಾಡಿನ ನೀಲಿಗಿರಿಯ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ಮಿ ಹಾಗೂ ಸೇನಾ ಸಿಬ್ಬಂದಿ ಸೇರಿ ಒಟ್ಟು 13 ಮಂದಿ ಪ್ರಾಣ ಬಿಟ್ಟಿದ್ದರು. ಹುತಾತ್ಮರಾದವರು ವಿವಿಧ ರಾಜ್ಯಗಳ ಮೂಲದವರಾಗಿದ್ದು, ಅವರ ಗ್ರಾಮಗಳಲ್ಲಿ ಕತ್ತಲೆ ಆವರಿಸಿದೆ.

ಲ್ಯಾನ್ಸ್​​​​ ನಾಯ್ಕ್ ಸಾಯಿ ತೇಜ್

ಹೆಲಿಕಾಪ್ಟರ್ ಪತನದಲ್ಲಿ ಬಲಿಯಾದವರಲ್ಲಿ ಲ್ಯಾನ್ಸ್​ ನಾಯ್ಕ್​ ಸಾಯಿ ತೇಜ್​ ಕೂಡ ಒಬ್ಬರು. ಕೇವಲ 27 ವರ್ಷದ ಸಾಯಿ ತೇಜ್​ ರೈತನ ಮಗನಾಗಿದ್ದು, ಕುರುಬ ಸಮುದಾಯಕ್ಕೆ ಸೇರಿದವರು. ಮೂಲತಃ ಆಂಧ್ರಪ್ರದೇಶದ ಕುರಬಾಳ ಕೋಟ ಮಂಡಲದ ಏಗುವ ರೇಗಡ ಗ್ರಾಮದವರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​​ಗೆ ಸೇರಿದ್ದ ಇವರಿಗೆ ಪತ್ನಿ ಹಾಗೂ ಮೂರು-ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ.

ಕಳೆದ ವರ್ಷ ಇವರನ್ನು ಸಿಡಿಎಸ್​ ಬಿಪಿನ್​ ರಾವತ್​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಯುವ ಯೋಧನ ಸಾವಿಗೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಹಿರಿಯ ಪೊಲೀಸ್ ಸಿಬ್ಬಂದಿ ಹಾಗೂ ಸಮಾಜದ ಎಲ್ಲಾ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್

ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ (29) ಕೂಡ ನಿನ್ನೆಯ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜೈಸಿಂಗ್‌ಪುರ ಪ್ರದೇಶದವರಾದ ವಿವೇಕ್​ 2 ತಿಂಗಳ ಮಗು ಹಾಗೂ ಪತ್ನಿಯನ್ನು ಅಗಲಿದ್ದಾರೆ. ವಿವೇಕ್ ಕುಮಾರ್ ಅವರು ಪ್ರಧಾನ ಸಿಬ್ಬಂದಿ ಅಧಿಕಾರಿ (ಪಿಎಸ್​ಒ) ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನದಿಂದಾಗಿ ಜೈಸಿಂಗ್‌ಪುರ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ.

ನಾಯಕ್ ಗುರುಸೇವಕ್ ಸಿಂಗ್

ಪಂಜಾಬ್​ನ ತಾರ್ನ ತರಣ್​ ಪ್ರದೇಶದ ನಾಯಕ್ ಗುರುಸೇವಕ್ ಸಿಂಗ್ ಅವರು ಬಡ ಕುಟುಂಬದಿಂದ ಬಂದವರಾಗಿದ್ದರು. ಇವರಿಗೆ ತಾಯಿ ಇಲ್ಲ. ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಾರೆ. ಗುರುಸೇವಕ್ ಸಿಂಗ್​ಗೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗವಿದೆ.

ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರಿಗೆ ಸಂಸತ್ತಿನ ಉಭಯ ಸದನದಲ್ಲಿ ಸಂತಾಪ; ಉನ್ನತ ಮಟ್ಟದ ತನಿಖೆಗೆ ಆದೇಶ

ಸತ್ಪಾಲ್ ರಾಯ್

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಹವಾಲ್ದಾರ್​ ಸತ್ಪಾಲ್ ರಾಯ್ ಅವರು ವ್ಯಯಕ್ತಿಯ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಮಗ ಕೂಡ ಸೇನೆಯಲ್ಲಿದ್ದಾರೆ. ಇವರ ಗ್ರಾಮದ ಜನರು ಮೇಣದಬತ್ತಿಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪೃಥ್ವಿ ಸಿಂಗ್ ಚೌಹಾಣ್

ಮೂಲತಃ ಮಧ್ಯಪ್ರದೇಶದವರಾದ ಪೃಥ್ವಿ ಸಿಂಗ್ ಚೌಹಾಣ್ ಕುಟುಂಬ ಉತ್ತರ ಪ್ರದೇಶದ ಆಗ್ರಾದಲ್ಲಿ ವಾಸವಾಗಿದೆ. 2006ರಲ್ಲಿ ಸೇನೆಗೆ ಸೇರಿದ್ದ ಇವರು 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟದ್ಟಿದ್ದರು. ಇವರಿಗೆ 12 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾನೆ. ಮುಂದಿನ ತಿಂಗಳು ಜನವರಿಗೆ ಮನೆಗೆ ಭೇಟಿ ನೀಡುವುದಾಗಿ ಪೃಥ್ವಿ ಹೇಳಿದ್ದರಂತೆ.

ಇವರ ಹೊರತಾಗಿ ಇನ್ನು ಹೆಲಿಕಾಪ್ಟರ್​ ಅವಘಡದಲ್ಲಿ ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಕಿರಿಯ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ನಾಯಕ್ ಜಿತೇಂದ್ರ ಕುಮಾರ್ ಕೂಡ ಹುತಾತ್ಮರಾಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಈ ದುರಂತದಲ್ಲಿ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details