ತೊಡುಪುಳ (ಕೇರಳ):ಕಳೆದ ಒಂದೂವರೆ ವರ್ಷಗಳಿಂದ ಪತ್ತನಂತಿಟ್ಟದ ಕಳಂಜೂರಿನಿಂದ ನಾಪತ್ತೆಯಾಗಿದ್ದ ನೌಶಾದ್ (36) ಎಂಬಾತನನ್ನು ಹತ್ಯೆ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ನಿನ್ನೆ ಆತನ ಪತ್ನಿ ಅಫ್ಸಾನಾ ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಆದರೆ, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇಂದು ಬೆಳಗ್ಗೆ ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ನೌಶಾದ್‌ನನ್ನು ಪೊಲೀಸರು ಜೀವಂತವಾಗಿ ಪತ್ತೆ ಮಾಡಿದ್ದಾರೆ. ನೌಶಾದ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ನಿನ್ನೆ ಸಂಜೆಯವರೆಗೂ ತೀವ್ರ ಗೊಂದಲದಲ್ಲಿತ್ತು.
ನೌಶಾದ್ ಮೃತದೇಹ ಹುಡುಕಾಡಿ ಸುಸ್ತಾಗಿದ್ದ ಪೊಲೀಸರು:ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ನೌಶಾದ್ ನನ್ನು ಕೊಂದಿರುವುದಾಗಿ ಆತನ ಪತ್ನಿ ಅಫ್ಸಾನಾ ನಿನ್ನೆ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ, ನೌಶಾದ್ ಪತ್ನಿ ಅಫ್ಸಾನಾ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದಾಗ ಪೊಲೀಸ್ ತಂಡಕ್ಕೆ ಗೊಂದಲ ಉಂಟಾಯಿತು. ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ಮಹತ್ವದ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ನೌಶಾದ್ ಬದುಕಿರುವ ಶಂಕೆ ಪೊಲೀಸರಿಗೆ ಬಂದಿತ್ತು. ನಿನ್ನೆ ಪೊಲೀಸರು ನೌಶಾದ್ ಮೃತದೇಹದ ಪತ್ತೆಗೆ ಹುಡುಕಾಟ ನಡೆಸಿದ್ದರು, ಆದರೆ ವಿಫಲರಾಗಿದ್ದರು.
ಪತ್ನಿ ತನ್ನ ಪ್ರಾಣಕ್ಕೆ ಹಾನಿ ಮಾಡಬಹುದು ಎಂಬ ಭಯದಿಂದ ಒಂದೂವರೆ ವರ್ಷದ ಹಿಂದೆ ಊರಿನಿಂದ ಓಡಿ ಹೋಗಿದ್ದೆ ಎಂದು ನೌಷಾದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ವಾಸವಿದ್ದು, ಅಲ್ಲಿಯೇ ದಿನಗೂಲಿ ನೌಕರನಾಗಿ ಜೀವನ ಸಾಗಿಸುತ್ತಿರುವುದಾಗಿಯೂ ಆತ ತಿಳಿಸಿದ್ದಾನೆ. ನಾಪತ್ತೆ ಪ್ರಕರಣ ಮತ್ತು ಪೊಲೀಸರ ಹುಡುಕಾಟದ ಬಗ್ಗೆ ತನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದ ನೌಶಾದ್, ತಾನು ಯಾವುದೇ ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ತನ್ನ ಹೆಂಡತಿ ತನ್ನನ್ನು ಕೊಲೆ ಮಾಡಿದ್ದಾಳೆ ಎಂಬ ಹೇಳಿಕೆಯ ಕುರಿತು ನೌಶಾದ್ಗೆ ತಿಳಿದಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ನೌಶಾದ್ ತನ್ನ ಸಂಬಂಧಿಕರೊಂದಿಗೆ ಸಂಪರ್ಕದಲ್ಲೂ ಇರಲಿಲ್ಲ.
ಅಫ್ಸಾನಾ ಹೇಳಿದ್ದೇನು?:''ನೌಶಾದ್ ಬದುಕಿದ್ದು, ಅವರ ಬಳಿಯೇ ನೆಲೆಸಿದ್ದಾನೆ'' ಎಂದು ತೊಮ್ಮನಕುನ್ನು ಗ್ರಾಮದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ತೊಡುಪುಳ ಪೊಲೀಸರು ನೌಶಾದ್ ನನ್ನು ಡಿವೈಎಸ್ಪಿ ಕಚೇರಿಗೆ ಕರೆದೊಯ್ದರು. ನಾಪತ್ತೆ ಪ್ರಕರಣದ ಮುಂದಿನ ಪ್ರಕ್ರಿಯೆಗಾಗಿ ಕೂಡಲ್‌ನಿಂದ ಪೊಲೀಸ್ ತಂಡವು ತೊಡುಪುಳಕ್ಕೆ ತಲುಪಿದೆ. ಕೊನೆಗೆ ನೌಶಾದ್ ನಾಪತ್ತೆಯಾಗಿರುವ ಕುರಿತು ಅಫ್ಸಾನಾ, ತನ್ನ ಸ್ನೇಹಿತ ನಸೀರ್ ಸಹಾಯದಿಂದ ಗೂಡ್ಸ್ ಆಟೋದಲ್ಲಿ ಮೃತದೇಹವನ್ನು ಸಾಗಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆತನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದು, ನೌಶಾದ್‌ನ ಶವವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿರುವುದಾಗಿ ಅಫ್ಸಾನಾ ಹೇಳಿರುವುದು ಸುಳ್ಳು ಎಂದು ತಿಳಿದು ಬಂದಿದೆ.