ಶ್ರೀನಗರ(ಜಮ್ಮು ಕಾಶ್ಮೀರ):ಶ್ರೀನಗರದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಭಯೋತ್ಪಾದಕನನ್ನು ಯೋಧರು ಬೇಟೆಯಾಡಿದ್ದಾರೆ. ಇನ್ನೊಂದೆಡೆ ಪೂಂಚ್‌ನ ಎಲ್ಒಸಿಯಲ್ಲಿ ಅಡಗಿಸಿಟ್ಟಿದ್ದ ಬೂಬಿ ಟ್ರ್ಯಾಪ್ನಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಶ್ರೀನಗರದ ಕ್ರೀಸ್ಬಲ್ ಪಾಪ್ಪೋರಾ ಸಂಗಮ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಇಟಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ಆದಿಲ್ ಪರ್ಯೆ ಎಂಬ ಉಗ್ರನನ್ನು ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಎಲ್ಇಟಿ ಉಗ್ರನನ್ನು ಸದೆಬಡಿದ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸರು, ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಗುಲಾಂ ಹಸನ್ ದಾರ್ ಮತ್ತು ಸೈಫುಲ್ಲಾ ಖಾದ್ರಿ ಎಂಬ ಇಬ್ಬರು ಪೊಲೀಸರ ಹತ್ಯೆಯಲ್ಲಿ ಹತನಾದ ಉಗ್ರಗಾಮಿ ಆದಿಲ್ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.