ನವದೆಹಲಿ :ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಎಎನ್ಡಿಐಎ ಮೈತ್ರಿಕೂಟದ ನಾಯಕರು ಸಭೆ ನಡೆಸಿದ್ದಾರೆ. ವಿರೋಧಪಕ್ಷದ ನಾಯಕರ ಒಕ್ಕೂಟವಾದ 'ಇಂಡಿಯಾ' ( ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲ್ಯೂಸಿವ್ ಅಲೆಯನ್ಸ್) ನಾಯಕರು ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ತಂತ್ರಗಳ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂಬರುವ ಲೋಕಸಭೆ ಚುನಾವಣೆಯ ಬಗ್ಗೆಯೂ ಚರ್ಚಿಸಿದ್ದಾರೆ ಎಂಬುದು ತಿಳಿದುಬಂದಿದೆ.
ವಿರೋಧಪಕ್ಷದ ನಾಯಕರು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ತಮ್ಮ ಮೂರನೇ ಸಭೆ ನಡೆಸಿದರು. ಅಲ್ಲಿ ಅವರು ಮುಂಬರುವ 2024ರ ಲೋಕಸಭೆಯ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಣಯ ಕೈಗೊಂಡಿದ್ದರು. ಮೊದಲ ಸಭೆ ಜೂನ್ 23ರಂದು ಪಾಟ್ನಾದಲ್ಲಿ ನಡೆದಿತ್ತು. ಅದರಂತೆ ಜುಲೈ 17-18 ರಂದು ಬೆಂಗಳೂರಿನಲ್ಲಿ ಎರಡನೆ ಮೀಟಿಂಗ್ ನಡೆದಿತ್ತು.
ಈ ಬಗ್ಗೆ ಕಾಂಗ್ರೆಸ್ ಸಂಸದ ಸಯ್ಯದ್ ನಸೀರ್ ಹುಸೇನ್ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಚರ್ಚೆ 5 ದಿನದ ವಿಶೇಷ ಅಧಿವೇಶನದ ಸುತ್ತ ನಡೆಯಲಿದೆ. ನಮ್ಮ ಸಮಸ್ಯೆಗಳು ಏನು?. ಜನರ ಸಮಸ್ಯೆಗಳು ಏನು? ಇವತ್ತು ದೇಶ ಯಾವ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಾವು ಪಟ್ಟಿಮಾಡಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಒಕ್ಕೂಟದ ನಾಯಕರು ಚರ್ಚೆ ನಡೆಸಿದ್ದೇವೆ. ಮುಂದಿನ ಐದು ದಿನದ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ನಾವು ಪ್ರಶ್ನೆಗಳನ್ನು ಎತ್ತಲಿದ್ದೇವೆ ಎಂದು ತಿಳಿಸಿದ್ದಾರೆ.