ಗಯಾ(ಬಿಹಾರ):ರೈಲು ಭಾರತೀಯ ಸಂಚಾರ ಇಲಾಖೆಯ ಜೀವನಾಡಿ. ಪ್ರತಿದಿನ ಲಕ್ಷಾಂತರು ಜನರು ವಿವಿಧ ಪ್ರದೇಶಗಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ, ಬಹುತೇಕ ಎಲ್ಲ ರೈಲಿನ ಬೋಗಿಗಳು ತುಂಬಿ ತುಳುಕುತ್ತಿರುತ್ತವೆ. ರೈಲಿನ ಬೋಗಿಗಳಲ್ಲಿ ಬ್ಯಾಗ್ ಇಡುವ ಸ್ಥಳಗಳಲ್ಲೂ ಹತ್ತಿ ಪ್ರಯಾಣಿಸುತ್ತಾರೆ. ಆದರೆ, ಇಲ್ಲೋರ್ವ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸುಮಾರು 190 ಕಿಲೋ ಮೀಟರ್ ದೂರವನ್ನು ರೈಲಿನ ಇಂಜಿನ್ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.
ಬಿಹಾರದ ರಾಜ್ಗಿರ್ನಿಂದ ಗಯಾದವರೆಗೆ ವ್ಯಕ್ತಿ ಇಂಜಿನ್ ಕೆಳಗೆ ಕುಳಿತು ಪ್ರಯಾಣ ಬೆಳೆಸಿದ್ದಾನೆಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವ್ಯಕ್ತಿ ಪ್ರಯಾಣ ಬೆಳೆಸುತ್ತಿರುವುದನ್ನ ರೈಲಿನ ಚಾಲಕ ನೋಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಬಂಧಿಸಿರುವ ಸಿಬ್ಬಂದಿ ಬಳಿಕ ಸರಿಯಾದ ಮಾಹಿತಿ ಇಲ್ಲದ ಕಾರಣ ಬಿಟ್ಟು ಕಳುಹಿಸಿದ್ದಾರೆಂದು ಹೇಳಲಾಗ್ತಿದೆ.