ಮುಂಬೈ(ಮಹಾರಾಷ್ಟ್ರ): ಮುಂಬೈನ ಅಂಬೋಲಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಮಗ ಥಳಿಸಿ, ನಂತರ ಕಟ್ಟಡದ 7ನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಪತ್ನಿ ಮತ್ತು ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ.
53 ವರ್ಷದ ಕೇಂದ್ರ ಸರ್ಕಾರಿ ನೌಕರನನ್ನು ಅವರ ಪತ್ನಿ ಮತ್ತು ಮಗ ತಮ್ಮ ಕಟ್ಟಡದ ಏಳನೇ ಮಹಡಿಯ ಫ್ಲಾಟ್‌ನಿಂದ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಐಡಿಬಿಐ) ಅಸಿಸ್ಟೆನ್ಸ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಂತಾನ ಕೃಷ್ಣನ್ ಶೇಷಾದ್ರಿ ಅವರು ತಮ್ಮ ಮಗನ ಉನ್ನತ ವ್ಯಾಸಂಗಕ್ಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮಗ ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸಂತಾನ ಕೃಷ್ಣನ್ ಶೇಷಾದ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಾಯಿ-ಮಗ ಇಬ್ಬರೂ ಪೊಲೀಸರಿಗೆ ಹೇಳಿದ್ದರು. ಈ ಕುಟುಂಬವು ಅಂಧೇರಿ ಪಶ್ಚಿಮ ವಲಯದ ವೀರ ದೇಸಾಯಿ ರಸ್ತೆಯಲ್ಲಿರುವ ಎಸ್‌ಐಡಿಬಿಐ ಅಧಿಕಾರಿಗಳ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿದೆ. ಶೇಷಾದ್ರಿ ಅವರ ಪುತ್ರ ಅರವಿಂದ್ (26) ಎರಡು ವರ್ಷಗಳ ಹಿಂದೆ ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ಬಯಸಿದ್ದರು.
ಹಣದ ವಿಚಾರವಾಗಿ ನಡೆದಿತ್ತು ಜಗಳ:ಅರವಿಂದ್ ಮತ್ತು ತಾಯಿ ಜೈಶೀಲಾ, ಕೆನಡಾದಲ್ಲಿ ಉನ್ನತ ವ್ಯಾಸಂಗದ ಬಗ್ಗೆ ಶೇಷಾದ್ರಿ ಜೊತೆ ಆಗಾಗ ಹೇಳುತ್ತಿದ್ದರು. ಗುರುವಾರ ರಾತ್ರಿ ಹಣದ ವಿಚಾರವಾಗಿ ಜಗಳವಾಡಿ, ಅವರನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.