ವನಪರ್ತಿ(ತೆಲಂಗಾಣ): ಮದುವೆಯ ಹೆಸರಿನಲ್ಲಿ ಒಬ್ಬರ ನಂತರ ಮತ್ತೊಬ್ಬರಿಗೆ ಮೋಸ. ಹೀಗೆ, ಒಟ್ಟು ಐವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡು, ವಂಚನೆ ಮಾಡಿರುವ ಪ್ರಕರಣವೊಂದು ತೆಲಂಗಾಣದಲ್ಲಿ ನಡೆದಿದೆ. ಪ್ರಕರಣ ನಾಲ್ಕನೇ ಪತ್ನಿ ನೀಡಿರುವ ದೂರಿನಿಂದಾಗಿ ಬೆಳಕಿಗೆ ಬಂದಿದೆ. ವನಪರ್ತಿ ಪಾನಗಲ್ ಮಂಡಲದ ಮಂಗಲಪಲ್ಲಿ ನಿವಾಸಿ ಮಧು ವಂಚನೆ ಮಾಡಿರುವ ಆರೋಪಿ.
ಕಳೆದ ಆರು ತಿಂಗಳ ಹಿಂದೆ ಐದನೇ ಮದುವೆ ಮಾಡಿಕೊಂಡಿರುವ ಮಧು, ಅದಕ್ಕೂ ಮುಂಚಿತವಾಗಿ ಒಟ್ಟು ನಾಲ್ಕು ಮದುವೆ ಮಾಡಿಕೊಂಡಿದ್ದನು. ನಾಲ್ಕನೇ ಹೆಂಡ್ತಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದು, ಗರ್ಭಿಣಿಯಾಗಿದ್ದರಿಂದ ತವರು ಮನೆಯಲ್ಲಿಯೇ ಬಿಟ್ಟು ಬಂದಿದ್ದನು. ಆಕೆ, ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಗೆ ಕರೆತಂದಿಲ್ಲ. ಇದರ ನಡುವೆ ಗಂಡನಿಗೋಸ್ಕರ ಹುಡುಕಾಟ ನಡೆಸಿದಾಗ, ಮತ್ತೊಂದು ಮದುವೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.