ನರಸೀಪಟ್ಟಣ( ಆಂಧ್ರಪ್ರದೇಶ):ಪತ್ನಿಯನ್ನು ಗಾರ್ಮೆಂಟ್ ಅಂಗಡಿ ಮಾಲೀಕನೊಬ್ಬ ಅಪಹರಿಸಿ, ತನ್ನಲ್ಲಿ ಉಳಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದು ನನ್ನನ್ನು ಘಾಸಿಗೊಳಿಸಿದ್ದು, ಇಹಲೋಕ ತ್ಯಜಿಸುತ್ತಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮವಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಶರಣಾಗಿದ್ದಾನೆ.
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ನರಸೀಪಟ್ಟಣದ ಕಾಮಿರೆಡ್ಡಿ ದುರ್ಗಾಪ್ರಸಾದ್ (35) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದುರ್ಗಾಪ್ರಸಾದ್ ಇದಕ್ಕೂ ಮೊದಲು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅದರಲ್ಲಿ 'ನರಸೀಪಟ್ಟಣದ ಗಾರ್ಮೆಂಟ್ಸ್ ಅಂಗಡಿಯ ಮ್ಯಾನೇಜರ್ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಅವಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾನೆ. ಈ ಬಗ್ಗೆ ಅವನು ಗೊತ್ತಿಲ್ಲದಂತೆ ನಟಿಸುತ್ತಿದ್ದಾನೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದು, ಅವನ ಮತ್ತು ಇತರ ಇಬ್ಬರ ಕಿರುಕುಳದಿಂದ ನಾನು ಸಾಯುತ್ತಿದ್ದೇನೆ.
ಗಾರ್ಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ವಿಚಾರಿಸಿದರೆ ಈ ಬಗ್ಗೆ ಎಲ್ಲ ಮಾಹಿತಿ ಸಿಗಲಿದೆ. ಈ ಹಿಂದೆ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಿದ್ದಾರೆ. ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.