ಲೂಧಿಯಾನ:ಅನಾರೋಗ್ಯದ ಕಾರಣಕ್ಕಾಗಿ ಎಷ್ಟೋ ಜನರು ಹಾಸಿಗೆ ಹಿಡಿದು ಅಲ್ಲಿಯೇ ಜೀವನ ಮುಗಿಸುತ್ತಾರೆ. ಅಂತಹ ಜನರ ಮಧ್ಯೆ ಇವರು ವಿಶೇಷ ಮತ್ತು ಅಪರೂಪ. ಹೃದ್ರೋಗಿಯಾಗಿದ್ದರೂ ಛಲಬಿಡದೇ ಎವರೆಸ್ಟ್ ಶಿಖರದ ಬೇಸ್ ಕ್ಯಾಂಪ್ ಹತ್ತಿಳಿದಿದ್ದಾರೆ. ಇವರ ಈ ಸಾಹಸವೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಬರೀ ಸಾಹಸವಲ್ಲ, ಈ ದುಸ್ಸಾಹದ ಮಾಡಿದವರ ಹೆಸರು ನವೀನ್ ಮಿತ್ರಾ. ಇವರ ವಯಸ್ಸು 62. ಪಂಜಾಬ್ನ ಲೂಧಿಯಾನದವರು. ಹೃದ್ರೋಗಿಗಳಿಗೆ ಎವರೆಸ್ಟ್ ಶಿಖರ ಹತ್ತಲು ನಿಷೇಧವಿದ್ದರೂ ತಮಗಿದ್ದ ಕನಸನ್ನು ಈಡೇರಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟು ಹಿಮಶಿಖರದ ಬೇಸ್ಕ್ಯಾಂಪ್ವರೆಗೆ ತೆರಳಿ ವಾಪಸ್ ಬಂದಿದ್ದಾರೆ. ಇವರ ಈ ಸಾಹಸಕ್ಕೆ ಕುಟುಂಬಸ್ಥರು ಮತ್ತು ಊರಿನ ಜನರು ಅಚ್ಚರಿಯ ಜೊತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
2016 ರಲ್ಲಿ ಬೈಪಾಸ್ ಸರ್ಜರಿ:ನವೀನ್ ಮಿತ್ರಾರ ಹೃದಯದ ಒಂದು ಭಾಗವು 100 ಪ್ರತಿಶತದಷ್ಟು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಹೀಗಾಗಿ ಅವರಿಗೆ 2016 ರಲ್ಲಿ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವೈದ್ಯರು ಹತ್ತು ಹಲವು ಆರೋಗ್ಯದ ಎಚ್ಚರಿಕೆಗಳನ್ನು ನೀಡಿದ್ದರು. ಸೂಕ್ಷ್ಮ ಜೀವನ ನಡೆಸಬೇಕು ಎಂಬುದು ಮೊದಲ ಕರಾರಾಗಿತ್ತು. ಆದರೆ, ಇದನ್ನೆಲ್ಲ ಮೆಟ್ಟಿನಿಂತ ನವೀನ್, ತಮ್ಮಲ್ಲಿರುವ ಆತ್ಮಶಕ್ತಿಯಿಂದ ಸಾಹಸಗಳಿಗೆ ಕೈ ಹಾಕುತ್ತಿದ್ದರು. ಹುಚ್ಚು ಸಾಹಸಿಗ ನವೀನ್, ಮೇ 22 ರಂದು ಹಿಮಶಿಖರದ ಚಾರಣ ಆರಂಭಿಸಿದರು. ಅನಾರೋಗ್ಯವನ್ನೂ ಲೆಕ್ಕಿಸದೇ ಎವರೆಸ್ಟ್ನ ಬೇಸ್ ಕ್ಯಾಂಪ್ ಅನ್ನು ಹತ್ತಿ ಮೇ 28 ರಂದು ಮರಳಿದರು. ಇದಾದ ಬಳಿಕ ಲಡಾಖನ್ನ ಮತ್ತೊಂದು ಬೆಟ್ಟವನ್ನು ಹತ್ತಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಭಾರತ ಸರ್ಕಾರ ಅದರ ಚಾರಣವನ್ನು ನಿಷೇಧಿಸಿದೆ. ಹೀಗಾಗಿ ಅವರು ಕನಸು ಈಡೇರಲಿಲ್ಲ.