ಉತ್ತರ ಪ್ರದೇಶ: ಕೊರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಕೆಲವರಿಗೆ ಲಸಿಕೆಯ ಕುರಿತು ಇನ್ನೂ ಭಯ ಹೋಗಿಲ್ಲ. ಕೋವಿಡ್-19 ಲಸಿಕೆಗೆ ಹೆದರಿ ಕೆಲವರು ಮನೆಯನ್ನೇ ಖಾಲಿ ಮಾಡಿ ಓಡಿಹೋದ್ರೆ ಇನ್ನೂ ಕೆಲವರು ಮೈ ಮೇಲೆ ದೇವರು ಬಂದಂತೆ ನಾಟಕವಾಡಿದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಭೂಪ ಇನ್ನೂ ಮುಂದಕ್ಕೆ ಹೋಗಿ ಮರವೇರಿ ಕುಳಿತಿದ್ದಾನೆ.
ಹೌದು, ನನಗೆ ಲಸಿಕೆ ಹಾಕಿಸಿಕೊಳ್ಳಲು ಇಷ್ಟ ಇಲ್ಲ, ಭಯವಾಗುತ್ತದೆ ಎಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮರವೇರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ವರ್ತನೆ ನಗು ಮೂಡಿಸುವಂತಿದೆ.
ಈ ಕುರಿತು ಮಾಹಿತಿ ನೀಡಿರುವ ತಾಲೂಕ್ ಅಭಿವೃದ್ಧಿ ಅಧಿಕಾರಿ ಅತುಲ್ ದುಬೆ, ವ್ಯಾಕ್ಸಿನ್ ತೆಗೆದುಕೊಳ್ಳಲು ಇಷ್ಟವಿಲ್ಲ ಎಂದು ಬಲ್ಲಿಯಾದಲ್ಲಿ ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತಿದ್ದ. ಆದರೆ ನಮ್ಮ ತಂಡವು ಆತನನ್ನು ಮನವರಿಕೆ ಮಾಡಿದ ನಂತರ ಲಸಿಕೆ ತೆಗೆದುಕೊಳ್ಳಲು ಒಪ್ಪಿಕೊಂಡು, ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾನೆ ಎಂದಿದ್ದಾರೆ.