ಕರ್ನಾಟಕ

karnataka

ETV Bharat / bharat

ಉಗ್ರರ ಒಳನುಸುಳುವಿಕೆ ಯತ್ನ ತಡೆದ ಭಾರತೀಯ ಸೇನಾಪಡೆ: ಓರ್ವ ಭಯೋತ್ಪಾದಕ ಮಟಾಶ್​ - Militant infiltration in Poonch Sector

ಜಮ್ಮು ಕಾಶ್ಮೀರದ ಪೂಂಚ್​ ಸೆಕ್ಟರ್​ನಲ್ಲಿ ಉಗ್ರರ ಒಳನುಸುಳುವಿಕೆಯನ್ನು ಭಾರತೀಯ ಸೇನಾಪಡೆಗಳು ವಿಫಲಗೊಳಿಸಿವೆ. ಇದೇ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸಿವೆ.

ಉಗ್ರ ಒಳನುಸುಳುವಿಕೆ ಯತ್ನ ತಡೆದ ಭಾರತೀಯ ಸೇನಾಪಡೆ
ಉಗ್ರ ಒಳನುಸುಳುವಿಕೆ ಯತ್ನ ತಡೆದ ಭಾರತೀಯ ಸೇನಾಪಡೆ

By

Published : Apr 9, 2023, 10:55 AM IST

Updated : Apr 9, 2023, 12:00 PM IST

ಪೂಂಚ್​(ಜಮ್ಮು ಕಾಶ್ಮೀರ):ಜಮ್ಮು ಕಾಶ್ಮೀರದ ಪೂಂಚ್​ ಸೆಕ್ಟರ್​ನಲ್ಲಿ ಉಗ್ರರ ಗುಂಪೊಂದು ಗಡಿ ನುಸುಳುವಿಕೆ ಯತ್ನ ನಡೆಸಿದ್ದು, ಅದನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದಾರೆ. ಅಲ್ಲದೇ, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ.

ನಿನ್ನೆ ಮಧ್ಯರಾತ್ರಿ ಶೆಹಪುರ್​ ಸೆಕ್ಟರ್​ನ ಗಡಿಯ ನಿಯಂತ್ರಣ ರೇಖೆಯಲ್ಲಿ ಉಗ್ರರ ಗುಂಪು ಭಾರತದ ಗಡಿ ಬೇಲಿಯನ್ನು ದಾಟುವಾಗ, ಅದನ್ನು ಗುರುತಿಸಿದ ಭಾರತೀಯ ಸೇನಾಪಡೆ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಉಗ್ರರು ಮತ್ತು ಸೈನಿಕರ ಮಧ್ಯೆ ಕೆಲಕಾಲ ಗುಂಡಿನ ಚಕಮಕಿ ನಡೆದಿದೆ. ಬಳಿಕ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇಡೀ ಪ್ರದೇಶವನ್ನು ಸೇನಾಪಡೆಗಳು ಸುತ್ತುವರೆದಿವೆ. ಪರಿಶೀಲನೆ ನಡೆಸಿದಾಗ ಓರ್ವ ಉಗ್ರನ ಮೃತದೇಹ ಪತ್ತೆಯಾಗಿದೆ. ಇತರ ಒಳನುಸುಳುಕೋರರು ಅರಣ್ಯದೊಳಕ್ಕೆ ನುಗ್ಗಿದ್ದಾರೆ. ಪ್ರದೇಶದಾದ್ಯಂತ ಪಹರೆ ಹೆಚ್ಚಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮುಂಬೈಗೆ ಉಗ್ರರ ಪ್ರವೇಶ:ದುಬೈನಿಂದ ಮೂವರು ಉಗ್ರರು ಮುಂಬೈ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಶುಕ್ರವಾರ ಬಂದಿದೆ. ವ್ಯಕ್ತಿಯೊಬ್ಬ ಮುಂಬೈ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ತೀವ್ರ ಪರಿಶೋಧನೆ ನಡೆಸುತ್ತಿದ್ದಾರೆ. ಈ ಮಾಹಿತಿ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ರಾಜಾ ಥೋಂಗೆ ಎಂದು ಹೇಳಿಕೊಂಡಿದ್ದಾನೆ. ಮುಂಬೈನಲ್ಲಿ ನಕಲಿ ಉದ್ಯಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ಆತ, ಭಯೋತ್ಪಾದಕರು ದುಬೈನಿಂದ ಮುಂಬೈಯೊಳಗೆ ನುಸುಳಿದ್ದಾರೆ ಎಂದಿದ್ದಾನೆ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಮುಂಬೈ ಪೊಲೀಸರ ತನಿಖಾ ತಂಡವು ಈ ಮಾಹಿತಿಯನ್ನು ಪರಿಶೀಲಿಸುವಲ್ಲಿ ನಿರತವಾಗಿದೆ.

ಉಗ್ರರಿಗಿದೆ ಪಾಕಿಸ್ತಾನದ ನಂಟು:ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ವ್ಯಕ್ತಿ, ಮುಂಬೈ ಪ್ರವೇಶಿಸಿದ ಮೂವರು ಭಯೋತ್ಪಾದಕರು ಕುತಂತ್ರಿ ಪಾಕಿಸ್ತಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಮೂವರು ಭಯೋತ್ಪಾದಕರ ಪೈಕಿ ಒಬ್ಬನ ಹೆಸರು ಮುಜಿಮ್ ಸೈಯದ್ ಎಂದು ತಿಳಿಸಿದ್ದಾನೆ. ಉಗ್ರ ಮುಜಿಮ್ ಸೈಯದ್​ನ ಕಾರ್ ನಂಬರ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ಪೊಲೀಸರಲ್ಲಿ ಹಂಚಿಕೊಂಡಿದ್ದಾನೆ. ಸೈಯದ್​ನ ಮೊಬೈಲ್ ಸಂಖ್ಯೆ ಮತ್ತು ವಾಹನದ ಸಂಖ್ಯೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಕಾಶ್ಮೀರ ಪಂಡಿತನ ಹತ್ಯೆ:ಕೆಲ ದಿನಗಳ ಹಿಂದೆ ಪುಲ್ವಾಮಾ ಜಿಲ್ಲೆಯಲ್ಲಿ ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮೃತರನ್ನು ಸಂಜಯ್ ಶರ್ಮಾ ಎಂದು ಹೇಳಲಾಗಿತ್ತು.

ದಕ್ಷಿಣ ಕಾಶ್ಮೀರದ ಅಚನ್ ನಿವಾಸಿಯಾಗಿದ್ದ ಸಂಜಯ್ ಶರ್ಮಾ ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಾರುಕಟ್ಟೆಗೆ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿ, ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ಕೂಡಲೇ ಅವರನ್ನು ಪುಲ್ವಾಮಾ ಆಸ್ಪತ್ರೆಗೆ ರವಾನಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಓದಿ:ಬಂಡೀಪುರದಲ್ಲಿ ಪ್ರಧಾನಿ.. ಓಪನ್ ಜೀಪ್​ನಲ್ಲಿ ಮೋದಿ ಸಫಾರಿ

Last Updated : Apr 9, 2023, 12:00 PM IST

ABOUT THE AUTHOR

...view details