ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಪ್ರಾರಂಭವಾಗಿದ್ದು, ಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ.
ಸಭೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಇಂಡಿಯಾ ಒಕ್ಕೂಟವು ಹಲವು ಸುದ್ಧಿ ಮಾಧ್ಯಮದ ನಿರೂಪಕರನ್ನು ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ ಅಥವಾ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ಹೇಳಿದರು.
ಇದು ನಮ್ಮ ಅಸಹಕಾರ ಚಳವಳಿಯಾಗಿದೆ. ನಾವು ಸಮಾಜದಲ್ಲಿ ದ್ವೇಷವನ್ನು ಹರಡುವವರಿಗೆ ಸಹಕರಿಸುವುದಿಲ್ಲ. ಅಲ್ಲದೇ ನಾವು ಅವರನ್ನು ದ್ವೇಷ ಹರಡುವುದರಿಂದ ತಡೆಯುತ್ತಿಲ್ಲ. ನೀವು ಸಮಾಜದಲ್ಲಿ ದ್ವೇಷ ಹರಡಬೇಕೆಂದಿಂದರೆ ಆ ರೀತಿ ಮಾಡಿ. ನಿಮಗೆ ಹಾಗೆ ಮಾಡಲು ಸ್ವಾತಂತ್ರ್ಯ ಇದೆ. ಇದರಲ್ಲಿ ಭಾಗಿಯಾಗದಿರಲು ನಮಗೂ ಸ್ವಾತಂತ್ರ್ಯ ಇದೆ ಎಂದರು.
ಅವರು ನಮ್ಮ ಶತ್ರುಗಳಲ್ಲ, ನಾವು ಅವರನ್ನು ದ್ವೇಷ ಮಾಡುವುದಿಲ್ಲ. ನಾಳೆ ಅವರು ಮಾಡುತ್ತಿರುವುದು ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ. ಇದನ್ನು ಬ್ಯಾನ್ ಎಂದು ಕರೆಯಬೇಡಿ ಎಂದು ಹೇಳಿದರು.