ಕರ್ನಾಟಕ

karnataka

ETV Bharat / bharat

Union Budget 2022: ಸ್ವತಂತ್ರ ಭಾರತದ ಬಜೆಟ್ ಪಯಣ..ಮೊದಲ ಬಜೆಟ್ ಮಂಡಿಸಿದ್ದು ಯಾರು? - ಭಾರತದ ಮೊದಲ ಬಜೆಟ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಹೇಳಿಕೆಯಾಗಿದ್ದು, ಆದಾಯ, ವೆಚ್ಚ, ಬೆಳವಣಿಗೆ ಅಂದಾಜುಗಳು ಮತ್ತು ಅದರ ವಿತ್ತೀಯ ಸ್ಥಿತಿ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ.

Union Budget 2022
ಕೇಂದ್ರ ಬಜೆಟ್ 2022

By

Published : Jan 31, 2022, 8:02 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಭಾರತದ ಬಜೆಟ್ ಇತಿಹಾಸವನ್ನು ನೋಡುವುದಾದರೆ ಅನೇಕ ಪ್ರಮುಖ ಮತ್ತು ಐತಿಹಾಸಿಕ ಬದಲಾವಣೆಗಳಾಗಿವೆ.

ಬ್ರಿಟಿಷರ ಆಳ್ವಿಕೆಯಲ್ಲಿ 1860ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ಆರಂಭವಾಯಿತು. 1947 ರಲ್ಲಿ ದೇಶ ಸ್ವತಂತ್ರಗೊಂಡ ನಂತರ, ಬಜೆಟ್ ಮಂಡಿಸುವ ವಿಧಾನ, ಅದರ ಸಮಯ, ದಿನಾಂಕ ಮತ್ತು ಭಾಷೆಯಲ್ಲಿ ಅನೇಕ ಆಸಕ್ತಿದಾಯಕ ಮತ್ತು ಐತಿಹಾಸಿಕ ಬದಲಾವಣೆಗಳಾಗಿವೆ.

ಸ್ವತಂತ್ರ ಭಾರತದ ಮೊದಲ ಬಜೆಟ್:ಭಾರತ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆದ ನಂತರ, ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ನವೆಂಬರ್ 26, 1947 ರಂದು ಆಗಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖ ಶೆಟ್ಟಿ ಅವರು ಮಂಡಿಸಿದರು. ಅವರು ವಕೀಲರು ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಇದು ತೆರಿಗೆ ಪ್ರಸ್ತಾವನೆಯನ್ನು ಹೊಂದಿಲ್ಲ. 7 ತಿಂಗಳ ಅವಧಿಯನ್ನು ಮಾತ್ರ ಒಳಗೊಂಡಿತ್ತು.

ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮುದ್ರಣ: ಭಾರತದ 3ನೇ ಹಣಕಾಸು ಸಚಿವ ಸಿ.ಡಿ.ದೇಶಮುಖ್ ಅವರು ಬಜೆಟ್‌ನಲ್ಲಿ ಹಲವಾರು ಐತಿಹಾಸಿಕ ಬದಲಾವಣೆಗಳನ್ನು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. 1951 ರಿಂದ 1957 ರವರೆಗೆ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿದ್ದ ದೇಶಮುಖ್ ಅವರ ಅಧಿಕಾರಾವಧಿಯಲ್ಲಿ, ಮೊದಲ ಬಾರಿಗೆ ಬಜೆಟ್ ಪ್ರತಿಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮುದ್ರಿಸಲಾಯಿತು.

ಈ ಹಿಂದೆ ಬಜೆಟ್ ಪ್ರತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಇದರೊಂದಿಗೆ, ಬಜೆಟ್‌ನ ವಿಧಾನಗಳು, ಸ್ವರೂಪ ಮತ್ತು ಗುರಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದ ಕೀರ್ತಿ ಹಣಕಾಸು ಸಚಿವ ದೇಶಮುಖ್ ಅವರಿಗೆ ಸಲ್ಲುತ್ತದೆ.

ಅವರ ಅಧಿಕಾರಾವಧಿಯಲ್ಲಿಯೇ ದೇಶದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು ಮತ್ತು ಕಪ್ಪು ಹಣವನ್ನು ಬಹಿರಂಗಪಡಿಸುವ ಯೋಜನೆಯನ್ನೂ ತರಲಾಯಿತು. ಆದಾಗ್ಯೂ, ಅವರಿಗಿಂತ ಮೊದಲು, ದೇಶದ 2ನೇ ಹಣಕಾಸು ಸಚಿವ ಜಾನ್ ಮಥಾಯ್ ಅವರು 1949ರ ತಮ್ಮ ಬಜೆಟ್‌ನಲ್ಲಿ ಯೋಜನಾ ಆಯೋಗ ಮತ್ತು ಪಂಚವಾರ್ಷಿಕ ಯೋಜನೆಯನ್ನು ಪ್ರಸ್ತಾಪಿಸಿದ್ದರು.

ಭಾರತದ ಬಜೆಟ್ ಮಂಡಿಸಿದ ಮೊದಲ ಮಹಿಳೆ: ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗಿಂತ ಮೊದಲು ಇನ್ನೊಬ್ಬ ಮಹಿಳಾ ನಾಯಕಿ ಭಾರತದ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಹೌದು ಸಂಸತ್ತಿನಲ್ಲಿ ಭಾರತದ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂದರೆ ಅದು ಇಂದಿರಾ ಗಾಂಧಿ.

1969ರಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಉಪಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರಿಂದ ಹಣಕಾಸು ಸಚಿವಾಲಯದ ಉಸ್ತುವಾರಿಯನ್ನು ಹಿಂತೆಗೆದುಕೊಂಡರು. ಇದರಿಂದ ಕುಪಿತರಾದ ಮೊರಾರ್ಜಿ ದೇಸಾಯಿ ಅವರು ಇಂದಿರಾ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದರು.

ಮೊರಾರ್ಜಿ ದೇಸಾಯಿ ಅನುಪಸ್ಥಿತಿಯಲ್ಲಿ ಪ್ರಧಾನಿ ಜವಾಬ್ದಾರಿ ಜತೆಗೆ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿದ್ದ ಇಂದಿರಾಗಾಂಧಿ ಅವರು 1970ರಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದರು ಮತ್ತು ಇದರೊಂದಿಗೆ 'ಬಜೆಟ್ ಮಂಡಿಸಿದ ಪ್ರಥಮ ಮಹಿಳೆ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ:ಮೊರಾರ್ಜಿ ದೇಸಾಯಿ ಅವರು ದೇಶದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರ ಸರ್ಕಾರದಲ್ಲಿ ಹಣಕಾಸು ಖಾತೆಯ ಜವಾಬ್ದಾರಿಯನ್ನು ನಿರ್ವಹಿಸಿದ ದೇಶದ ಮಾಜಿ ಪ್ರಧಾನಿ ಮತ್ತು ಉಪಪ್ರಧಾನಿ ದೇಸಾಯಿ ಅವರು ಅತಿ ಹೆಚ್ಚು ಅಂದರೆ 10 ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಪೈಕಿ 8 ಬಾರಿ ಅವರು ವಾರ್ಷಿಕ ಸಾಮಾನ್ಯ ಬಜೆಟ್ ಮತ್ತು 2 ಬಾರಿ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.

ಆರ್ಥಿಕ ಸುಧಾರಣೆಗಳ ಮೂಲಕ ಉದಾರೀಕರಣ: 1991ರಲ್ಲಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು ಮತ್ತು ಇದು ನೆಹರು - ಗಾಂಧಿ ಕುಟುಂಬದ ಹೊರತಾದ ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ ಸರ್ಕಾರವಾಗಿತ್ತು. ಪಿ.ವಿ. ನರಸಿಂಹರಾವ್ ಅವರು ಮನಮೋಹನ್ ಸಿಂಗ್ ಅವರನ್ನು ತಮ್ಮ ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಕೊಂಡರು. ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಸಿಂಗ್ ಅವರು 1991 ರಲ್ಲಿ ಮಂಡಿಸಿದ ಬಜೆಟ್ ನಂತರ ಭಾರತೀಯ ಆರ್ಥಿಕತೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು.

ಮನಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣೆಗಳನ್ನು ಪರಿಚಯಿಸಿದರು, 'ಪರವಾನಗಿ ರಾಜ್' ಅನ್ನು ರದ್ದುಗೊಳಿಸಲು ಪ್ರಾರಂಭಿಸಿದರು. ಅವರ ಅಧಿಕಾರಾವಧಿಯಲ್ಲಿ, ಭಾರತವು ಉದಾರೀಕರಣದ ಹಾದಿಯಲ್ಲಿ ವೇಗವಾಗಿ ಮುನ್ನುಗ್ಗುವುದನ್ನು ಕಾಣಬಹುದು.

ಬಜೆಟ್ ಮಂಡನೆ ಸಮಯ ಬದಲಾವಣೆ: ಭಾರತದಲ್ಲಿ ಬಜೆಟ್ ಮಂಡಿಸುವ ಟ್ರೆಂಡ್ ಆರಂಭವಾಗಿದ್ದು ಬ್ರಿಟಿಷರ ಕಾಲದಲ್ಲಿ. ಹಾಗಾಗಿ ಅವರು ತಮ್ಮ ದೇಶದ ಸಂಸತ್ತಿನ ಪ್ರಕಾರ ಭಾರತೀಯ ಸಂಸತ್ತಿನಲ್ಲಿ ಬಜೆಟ್ ಮಂಡಿಸುವ ಸಮಯವನ್ನು ಕೂಡ ನಿಗದಿ ಮಾಡಿದ್ದರು.

ಲಂಡನ್‌ನಲ್ಲಿ ಹಗಲು 11 ಗಂಟೆಯಾದಾಗ, ಭಾರತದಲ್ಲಿ ಸಂಜೆ 5 ಗಂಟೆ. 11 ಗಂಟೆಗೆ ಭಾರತದ ಬಜೆಟ್ ಅನ್ನು ಅದರ ಸಂಸದರಿಗೆ ತಿಳಿಸುವ ಸಲುವಾಗಿ ಬ್ರಿಟಿಷ್ ಸರ್ಕಾರ ಭಾರತದ ಸಂಸತ್ತಿನಲ್ಲಿ ಸಂಜೆ 5 ಗಂಟೆಗೆ ಬಜೆಟ್ ಅನ್ನು ಮಂಡಿಸುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವು ದಶಕಗಳ ಕಾಲ ಲೋಕಸಭೆಯಲ್ಲಿ ಸಂಜೆ 5 ಗಂಟೆಗೆ ಬಜೆಟ್ ಮಂಡನೆಯಾಗುತ್ತಿತ್ತು.

ಆದರೆ, 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆ ಸಮಯವನ್ನು ಬದಲಿಸಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಜೆ 5 ಗಂಟೆಗೆ ಬದಲಾಗಿ 11 ಗಂಟೆಗೆ ಬಜೆಟ್ ಮಂಡಿಸಿದ್ದರು. ಅಂದಿನಿಂದ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಜೆಟ್ ಮಂಡನೆ ದಿನಾಂಕ ಬದಲಾವಣೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಬಜೆಟ್ ಮಂಡನೆ ದಿನಾಂಕದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. 2017 ರಲ್ಲಿ, ಆಗಿನ (ದಿವಂಗತ) ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ ಕೊನೆಯ ದಿನಾಂಕದ ಬದಲಿಗೆ ಮೊದಲ ದಿನಾಂಕದಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದರು ಮತ್ತು ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುತ್ತದೆ. ಜೇಟ್ಲಿ ಅವರ ಅಧಿಕಾರಾವಧಿಯಲ್ಲಿ 9 ದಶಕಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಅಂತ್ಯ ಹಾಡುವ ಮೂಲಕ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ಅನ್ನು ಸಹ ಸೇರಿಸಲಾಯಿತು.

ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್: 1970ರಲ್ಲಿ ಬಜೆಟ್ ಮಂಡಿಸಿದ ಇಂದಿರಾಗಾಂಧಿ ಅವರು ಹಣಕಾಸು ಖಾತೆಯ ಉಸ್ತುವಾರಿ ಸಚಿವರಾಗಿ ಮೊದಲ ಮಹಿಳೆಯಾಗಿದ್ದರೂ, ದೇಶದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿದೆ.

ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆದರೆ, ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಯೊಂದಿಗೆ, ಅನೇಕ ದಾಖಲೆಗಳು ಸಹ ಅವರ ಹೆಸರಿನಲ್ಲಿವೆ. ಇದರಿಂದಾಗಿ ಅವರು ಐತಿಹಾಸಿಕ ಬದಲಾವಣೆಗಳನ್ನು ತಂದ ಹಣಕಾಸು ಸಚಿವರ ಪಟ್ಟಿಗೆ ಸೇರಿದ್ದಾರೆ.

ಬ್ರೀಫ್​​​ ಕೇಸ್​​​​​​​​ ಸಂಪ್ರದಾಯ ಅಂತ್ಯ.. ಕೆಂಪು ಬಟ್ಟೆ ಚೀಲದಲ್ಲಿ ಬಜೆಟ್​ ಪೇಪರ್​:ಸೀತಾರಾಮನ್ ಬ್ರಿಟಿಷರ ಕಾಲದ ಮತ್ತೊಂದು ಸಂಪ್ರದಾಯವನ್ನು ಬದಲಾಯಿಸಿದರು. ಬ್ರೀಫ್ಕೇಸ್ ಅಥವಾ ಸೂಟ್ಕೇಸ್​​ನಲ್ಲಿ ಬಜೆಟ್ ಮಂಡಿಸಿದರು. ಬ್ರೀಫ್‌ಕೇಸ್ ಬದಲಿಗೆ ಕೆಂಪು ಬಟ್ಟೆಯ ಚೀಲದಲ್ಲಿ ಬಜೆಟ್ ಪೇಪರ್‌ಗಳನ್ನು ಹೊತ್ತುಕೊಂಡು 2019 ರಲ್ಲಿ ಸಂಸತ್ ಭವನಕ್ಕೆ ತೆರಳಿದ್ದರು.

ಕಾಗದರಹಿತ ಡಿಜಿಟಲ್ ಬಜೆಟ್:ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ, 2021 ರಲ್ಲಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಸಂಪೂರ್ಣವಾಗಿ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ಮಂಡಿಸಲಾಯಿತು. ಈ ವರ್ಷ ಬಜೆಟ್ ಪ್ರತಿ ಮುದ್ರಿಸುವ ಸಂಪ್ರದಾಯ ನಿಂತಿದೆ. ಇದರೊಂದಿಗೆ ಸೀತಾರಾಮನ್ ಅವರು ಪುಸ್ತಕಗಳು ಮತ್ತು ಪೇಪರ್‌ಗಳ ಬದಲಿಗೆ ಟ್ಯಾಬ್‌ಗಳಿಂದ ಬಜೆಟ್ ಮಂಡಿಸಿದ ದೇಶದ ಮೊದಲ ಹಣಕಾಸು ಸಚಿವರಾದರು. ಈ ಬಾರಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಕಾಗದ ರಹಿತ ಡಿಜಿಟಲ್ ಬಜೆಟ್ ಮಂಡಿಸಲಿದ್ದಾರೆ.

ಹಲ್ವಾ ಬದಲಿಗೆ ಸಿಹಿತಿಂಡಿ:ಸಾಂಪ್ರದಾಯಿಕವಾಗಿ ಬಜೆಟ್ ಮುದ್ರಣದ ಕೆಲಸವು 'ಹಲ್ವಾ'ಸಮಾರಂಭದಿಂದ ಪ್ರಾರಂಭವಾಗುತ್ತದೆ. ಇದಾದ ಬಳಿಕ ಬಜೆಟ್ ಸಿದ್ಧಪಡಿಸುವ ಎಲ್ಲ ಅಧಿಕಾರಿಗಳನ್ನು ಸಚಿವಾಲಯದ ನೆಲಮಾಳಿಗೆಯಲ್ಲಿ ಲಾಕ್ ಮಾಡಲಾಗುತ್ತದೆ. ಲೋಕಸಭೆಯಲ್ಲಿ ಬಜೆಟ್ ಮಂಡನೆಯಾದ ಬಳಿಕ ಅಧಿಕಾರಿಗಳು ಯಾರನ್ನಾದರೂ ಭೇಟಿ ಮಾಡಬಹುದು. ಆದರೆ, ಈ ಬಾರಿ ಹಲ್ವಾ ಸಮಾರಂಭ ಆಯೋಜಿಸಿಲ್ಲ. ಬಜೆಟ್ ಮಂಡನೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ, ಸಹಾಯಕರಿಗೆ ಸಿಹಿತಿಂಡಿಯನ್ನಷ್ಟೇ ನೀಡಲಾಗಿದೆ. ಇದು ಸಹ ಕೇಂದ್ರ ಸರ್ಕಾರದ ಬಜೆಟ್ ಸಂಪ್ರದಾಯದ ಮತ್ತೊಂದು ಬದಲಾವಣೆ ಎನ್ನಬಹುದಾಗಿದೆ.

ಸುದೀರ್ಘ ಭಾಷಣ ಮಾಡಿದ ದಾಖಲೆ:ಇದುವರೆಗಿನ ಬಜೆಟ್ ಮಂಡನೆಯ ಇತಿಹಾಸದಲ್ಲಿ ಸುದೀರ್ಘ ಭಾಷಣ ಮಾಡಿದ ದಾಖಲೆ ಹಾಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿದೆ. 2020 ರಲ್ಲಿ ಲೋಕಸಭೆಯಲ್ಲಿ ಬಜೆಟ್ ಮಂಡಿಸುವಾಗ ಅವರು 2 ಗಂಟೆ 41 ನಿಮಿಷಗಳ ಭಾಷಣ ಮಾಡುವ ಮೂಲಕ ಹೊಸ ದಾಖಲೆ ಮಾಡಿದರು.

ಇದಕ್ಕೂ ಮುನ್ನ ಎನ್‌ಡಿಎ ಸರ್ಕಾರದ ಮತ್ತೊಬ್ಬ ಹಣಕಾಸು ಸಚಿವ ಜಸ್ವಂತ್ ಸಿಂಗ್ ಹೆಸರಿನಲ್ಲಿ ಈ ದಾಖಲೆಯಿತ್ತು. 2003ರಲ್ಲಿ ಜಸ್ವಂತ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸುವಾಗ 2 ಗಂಟೆ 13 ನಿಮಿಷಗಳ ಕಾಲ ಭಾಷಣ ಮಾಡಿದ್ದರು.

ಇದನ್ನೂ ಓದಿಕೇಂದ್ರ ಬಜೆಟ್ : ಐಟಿ, ಕೈಗಾರಿಕೆ, ಉದ್ಯಮಗಳ ನಿರೀಕ್ಷೆ ಅಪಾರ

ABOUT THE AUTHOR

...view details