ಶ್ರೀನಗರ:ಸತೀಶ್ ಟಿಕೂ ಹತ್ಯೆ ಪ್ರಕರಣದ ವಿಚಾರಣೆಯನ್ನು ಶ್ರೀನಗರದ ಸ್ಥಳೀಯ ನ್ಯಾಯಾಲಯ ಜೂನ್ 7ಕ್ಕೆ ಮುಂದೂಡಿದೆ. ಉಗ್ರಗಾಮಿಯಾಗಿದ್ದ ಬಿಟ್ಟಾ ಕರಾಟೆಯಿಂದ ಟಿಕೂ ಹತ್ಯೆಯಾಗಿತ್ತು. ಅರ್ಜಿದಾರರು ಮತ್ತು ಅವರ ಪರ ವಕೀಲರು ಸೋಮವಾರ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರಿಂದ, ಪ್ರಕರಣದ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಕಾಶ್ಮೀರಿ ಪಂಡಿತ್ ಸತೀಶ್ ಟಿಕೂ ಅವರನ್ನು ಹತ್ಯೆಗೈದ ಆರೋಪ ಹೊತ್ತಿರುವ ಪ್ರತ್ಯೇಕತಾವಾದಿ ನಾಯಕ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ನ ಮಾಜಿ ಉಗ್ರಗಾಮಿ. ಟಿಕೂ ಹತ್ಯೆಯಾದ ಸುಮಾರು 31 ವರ್ಷಗಳ ನಂತರ, ಕುಟುಂಬವು ಮಾರ್ಚ್ 30 ರಂದು ಶ್ರೀನಗರದ ಸೆಷನ್ಸ್ ನ್ಯಾಯಾಲಯದಲ್ಲಿ ಕರಾಟೆ ವಿರುದ್ಧ ಅರ್ಜಿ ಸಲ್ಲಿಸಿತ್ತು. ನಂತರ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮೇ 10 ರಂದು ನಿಗದಿಪಡಿಸಿತ್ತು.
ಟಿಕೂ ಪರ ವಕೀಲ, ಉತ್ಸವ್ ಬೈನ್ಸ್ ಅವರು ಭದ್ರತಾ ಕಾರಣ ನೀಡಿ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು. ಮೂಲಗಳ ಪ್ರಕಾರ, ಭದ್ರತಾ ಕಾರಣಗಳಿಂದಾಗಿ ಅರ್ಜಿದಾರರು ಹೈಕೋರ್ಟ್ಗೆ ಹೋಗಲು ಯೋಜಿಸುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ನ್ಯಾಯಾಲಯದ ಅಧಿಕಾರಿಯೊಬ್ಬರು, "ಅರ್ಜಿದಾರರು ಈ ವಿಷಯದ ಬಗ್ಗೆ ಆರಂಭಿಕ ವಿಚಾರಣೆಗೆ ಆಸಕ್ತಿ ಹೊಂದಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ಅವರು ಸಮಯವನ್ನು ಹಾಳು ಮಾಡುತ್ತಿದ್ದಾರೆ" ಎಂದು ಹೇಳಿದರು.