ತೆಲಂಗಾಣ:ಬಿಜೆಪಿ ನಾಯಕರೊಬ್ಬರ ಮೃತದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ರಾಜದಲ್ಲಿ ಸಂಚಲನ ಮೂಡಿಸಿದೆ. ಅನುಮಾನಾಸ್ಪದವಾಗಿ ಕಾರಿನಲ್ಲಿ ಮೃತದೇಹ ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೇದಕ್ ಜಿಲ್ಲೆಯ ವೆಲ್ಡುರ್ತಿ ಮಂಡಲ ಮಂಗಳಪರ್ತಿ ಗ್ರಾಮ ಉಪನಗರದಲ್ಲಿ ಸೋಮವಾರ ರಾತ್ರಿ ರಸ್ತೆ ಬದಿಯಲ್ಲಿ ಕಾರು ಉರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಸರಪಂಚ್ ರಾಮಕೃಷ್ಣ ರಾವ್ ಅವರಿಗೆ ಮಾಹಿತಿ ನೀಡಿದರು. ಆದರೆ ಆ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಬೆಳಗ್ಗೆ ಮತ್ತೆ ಕಾರನ್ನು ಪರಿಶೀಲಿಸಿದ ಗ್ರಾಮಸ್ಥರಿಗೆ ಅದರಲ್ಲಿ ಮೃತದೇಹವಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಮೇದಕ್ ಪಟ್ಟಣದ ಶ್ರೀನಿವಾಸ್ ದಿಗಾ ಅವರು ಎಂದು ಗುರುತಿಸಿದ್ದಾರೆ. ಶ್ರೀನಿವಾಸ್ ಅವರು ಇಲ್ಲಿನ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದಾರೆ. ಈ ಕೃತ್ಯವನ್ನು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಎಸಗಿರಬಹುದು ಎಂದು ಸದ್ಯ ಅನುಮಾನ ವ್ಯಕ್ತವಾಗಿದೆ.
ಪ್ರಕರಣದ ತನಿಖೆಗೆ ನಾಲ್ಕು ತಂಡಗಳ ರಚನೆ:ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ಕೊಲೆಗಾರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ತೂಪ್ರಾನ್ ಡಿಎಸ್ಪಿ ಕಿರಣ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭವಾಗಿದ್ದು, ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಪೊಲೀಸರು ಮೇದಕ್ ಪಟ್ಟಣದಲ್ಲಿರುವ ಮೃತ ಶ್ರೀನಿವಾಸ್ ಅವರ ಮನೆಗೆ ತೆರಳಿ ಅವರ ಪತ್ನಿ ಹೈಂದಾವತಿಯಿಂದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ, "ಶ್ರೀನಿವಾಸ್ ಮಧ್ಯಾಹ್ನ ಮನೆಯಿಂದ ತೆರಳಿದ್ದು, ಸಂಜೆ 5 ಗಂಟೆ ಸುಮಾರಿಗೆ ಫೋನ್ ಮಾಡಿದ್ದಾರೆ. ಆದರೆ ಮೇದಕ್ನ ಶಿವನೂರು ದಾಟಿದ ಬಳಿಕ ಫೋನ್ ಸಿಗ್ನಲ್ ಸಂಪರ್ಕ ಕಳೆದುಕೊಂಡಿದೆ" ಎಂಬ ಅಂಶ ಬೆಳಕಿಗೆ ಬಂದಿದೆ.