ನವದೆಹಲಿ:ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ ಮಾಡಲಾಗಿದೆ. ಆದರೆ, ಪ್ರತಿ ಬಾರಿಯೂ ಅವರು ವಿಫಲರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು. ಲೋಕಸಭೆಯಲ್ಲಿಂದು ಪ್ರತಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಉತ್ತರಿಸಿ ಮಾತನಾಡಿದ ಅಮಿತ್ ಶಾ, "ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಮತ್ತೆ ಬೆಂಕಿ ಹಚ್ಚುವಲ್ಲಿ ರಾಹುಲ್ ಗಾಂಧಿ ಹೇಗೆ ಮುಂದಾಳತ್ವ ವಹಿಸಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ'' ಎಂದು ವಾಗ್ದಾಳಿ ನಡೆಸಿದರು.
''ಮಣಿಪುರವು ಜನಾಂಗೀಯ ಹಿಂಸಾಚಾರ ಇತಿಹಾಸ ಹೊಂದಿದೆ. ಇದು ಸಾಂಪ್ರದಾಯಿಕವಾಗಿ ಸೂಕ್ಷ್ಮ ರಾಜ್ಯ. ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ. ಆದರೆ, ವಿಡಿಯೋ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮೇ 4ರಂದು ಈ ವಿಡಿಯೋ ಚಿತ್ರೀಕರಿಸಲಾಗಿದೆ. ರಾಜಕೀಯ ಮಾಡಲು ಮುಂಗಾರು ಅಧಿವೇಶನಕ್ಕೆ ಮುನ್ನ ಇದನ್ನು ಬಿಡುಗಡೆ ಮಾಡಲು ಸಂರಕ್ಷಿಸಲಾಗಿತ್ತೇ'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ:Amit Shah: 'ಭ್ರಮೆ'! ಪ್ರತಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಲೋಕಸಭೆಯಲ್ಲಿ ಅಮಿತ್ ಶಾ ತಿರುಗೇಟು
ಮುಂದುವರೆದು, ''ಒಕ್ರಾಮ್ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಣಿಪುರದಲ್ಲಿ ಸುಮಾರು 2,000 ಜನರ ಕೊಲೆಯಾಗಿತ್ತು. ಅಲ್ಲದೇ, ಕಾಂಗ್ರೆಸ್ ಆಡಳಿತದಲ್ಲಿ ಒಂದೂವರೆ ವರ್ಷ ಕಾಲ ನಾಗಾ-ಕುಕಿ ಘರ್ಷಣೆಯನ್ನು ಮಣಿಪುರ ಕಂಡಿತ್ತು. ಆಗ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 45,000 ಜನರು ಸ್ಥಳಾಂತರಗೊಂಡಿದ್ದರು. ಆಗ ಯಾರಾದರೂ ಪ್ರಧಾನಿಯವರ ಹೇಳಿಕೆಗೆ ಬೇಡಿಕೆ ಇಟ್ಟಿದ್ದಾರಾ?. ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು ಗೃಹ ಖಾತೆಯ ರಾಜ್ಯ ಸಚಿವರೇ ಹೊರತು ಪ್ರಧಾನಿ ಅಥವಾ ಗೃಹ ಸಚಿವರಲ್ಲ'' ಎಂದರು.