ಖಮ್ಮಂ:ನಗರದ ನಯಾಬಜಾರ್ ಶಾಲೆಯ ಪಕ್ಕದಲ್ಲಿರುವ ಮಿಷನ್ ಭಗೀರಥ ಓವರ್‌ಹೆಡ್ ನೀರಿನ ಟ್ಯಾಂಕ್ ಸ್ವಚ್ಛ ಮಾಡಲು ಕಾರ್ಮಿಕ ಹೋಗಿದ್ದು, ಅಲ್ಲಿ ಪೈಪ್‌ಲೈನ್‌ಗೆ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕ ಚಿರ್ರ ಸಂದೀಪ್ (23) ಎಂದು ಗುರುತಿಸಲಾಗಿದೆ.
ಓವರ್‌ಹೆಡ್ ನೀರಿನ ಟ್ಯಾಂಕ್ ಕ್ಲೀನ್ ಮಾಡಲು ಚಿರ್ರ ಸಂದೀಪ್ ಜೊತೆ ಇನ್ನಿಬ್ಬರು ಕಾರ್ಮಿಕರು ಮೇಲಕ್ಕೆ ಹತ್ತಿದ್ದಾರೆ. ಟ್ಯಾಂಕ್ನಲ್ಲಿ ಮೊಣಕಾಲು ತನಕ ನೀರು ಇತ್ತು. ಈ ವೇಳೆ, ಟ್ಯಾಂಕ್ ಸ್ವಚ್ಛಗೊಳಿಸುವ ಕ್ರಮದಲ್ಲಿ ಆಕಸ್ಮಿಕವಾಗಿ ಸಂದೀಪ್ ಕಾಲು ಟ್ಯಾಂಕ್‌ನಿಂದ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ ಸಿಲುಕಿಕೊಂಡಿದೆ.
ಏಕಾಏಕಿ ನೀರು ಹರಿದಿದ್ದರಿಂದ ಸಂದೀಪ್ ಪೈಪ್‌ಲೈನ್ ಒಳಗೆ ತೇಲಿ ಹೋಗಿದ್ದಾರೆ. ಕೂಡಲೇ ಟ್ಯಾಂಕ್ನ ವಾಲ್ ಬಂದ್ ಮಾಡಲಾಗಿದೆ. ಆದರೆ, ಅಷ್ಟೋತ್ತಿಗಾಗಲೇ ಸಂದೀಪ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನೀರಿನ ಒತ್ತಡಕ್ಕೆ ಸಂದೀಪ್ ಮೃತ ದೇಹ ಅದೆಷ್ಟೋ ದೂರು ಹರಿದು ಹೋಗಿದೆ. ವಿಷಯ ತಿಳಿದು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸುವಂತೆ ಸಚಿವ ಪುವಾಡ ಅಜಯಕುಮಾರ್ ಸೂಚಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಶ್ರಮವಹಿಸಿ ಸಂದೀಪ್ ಮೃತದೇಹ ಹೊರತೆಗೆದರು.
ಸಂದೀಪ್ ಮಹಾನಗರ ಪಾಲಿಕೆಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂದೀಪ್ ಮೃತಪಟ್ಟಿದ್ದಾರೆ ಎಂದು ಬಿಎಸ್‌ಪಿ, ಎಂಆರ್‌ಪಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬಕ್ಕೆ 6 ಲಕ್ಷ ಪರಿಹಾರ, ಎರಡು ಬೆಡ್ ರೂಂ ಮನೆ, ಕುಟುಂಬದ ಒಬ್ಬರಿಗೆ ಮಹಾನಗರ ಪಾಲಿಕೆಯಲ್ಲಿ ಉದ್ಯೋಗ, ದಲಿತಬಂಧು ಯೋಜನೆ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದಾಗ ಪ್ರತಿಭಟನೆ ಕೈ ಬಿಡಲಾಯಿತು.