ಆಲಪ್ಪುಳ(ಕೇರಳ):ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಸಂಕಷ್ಟ ಅನುಭವಿಸಿರುವ ಅನೇಕ ಕಥೆಗಳು ನಮ್ಮ ಕಣ್ಮುಂದೆ ಇವೆ. ಆದರೆ, ಇದರ ಸದುಪಯೋಗ ಪಡೆದುಕೊಂಡ ಬೆರಳೆಣಿಕೆಯಷ್ಟು ಜನರು ಹೊಸ ಹೊಸ ಅವಿಷ್ಕಾರ ಮಾಡಿದ್ದಾರೆ. ಇದೀಗ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತಹ ಪ್ರತಿಭಾನ್ವಿತ ವ್ಯಕ್ತಿಗೆ ಸಂಬಂಧಿಸಿದೆ.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವ್ಯಕ್ತಿಯೋರ್ವ ತಾವೇ ನಿರ್ಮಾಣ ಮಾಡಿರುವ ವಿಮಾನದಲ್ಲಿ ಇದೀಗ ಕುಟುಂಬದೊಂದಿಗೆ ವಿದೇಶಗಳ ಸಂಚಾರ ಮಾಡ್ತಿದ್ದಾರೆ. ಕೇರಳದ ಆಲಪ್ಪುಳ ಜಿಲ್ಲೆಯ ಅಶೋಕ್ ನಾಲ್ಕು ಸೀಟುಗಳಿರುವ ವಿಮಾನ ನಿರ್ಮಿಸಿದ್ದು, ಅದರಲ್ಲಿ ಈಗಾಗಲೇ ಯುರೋಪ್ ಪ್ರವಾಸ ಸಹ ಮಾಡಿ ಬಂದಿದ್ದಾರೆ. ಈ ವಿಮಾನ ನಿರ್ಮಿಸಿಲು ಅಶೋಕ್ ಬರೋಬ್ಬರಿ 18 ತಿಂಗಳಕ್ಕೂ ಅಧಿಕ ಕಾಲಾವಧಿ ತೆಗೆದುಕೊಂಡಿದ್ದಾರೆ. ಅಶೋಕ್ ಅಲಿಸೇರಿಲ್ ತಾಮರಾಕ್ಷನ್ ಕೇರಳದ ಮಾಜಿ ಶಾಸಕ ಎ ವಿ ತಾಮರಾಕ್ಷನ್ ಅವರ ಪುತ್ರ. ಪೈಲಟ್ ಲೈಸನ್ಸ್ ಹೊಂದಿರುವ ಅಶೋಕ್, ತಮ್ಮ ಕುಟುಂಬದೊಂದಿಗೆ ಪ್ರಪಂಚದ ಪ್ರವಾಸ ಮಾಡುತ್ತಿದ್ದಾರೆ.
ವಿಮಾನ ನಿರ್ಮಾಣ ಕೆಲಸ ಆರಂಭವಾಗಿದ್ದು ಹೀಗೆ?:ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಅಶೋಕ್ ಲಾಕ್ಡೌನ್ ಸಂದರ್ಭದಲ್ಲಿ ಖುದ್ದಾಗಿ ವಿಮಾನ ತಯಾರಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೋಸ್ಕರ ಲಂಡನ್ನಲ್ಲಿ ತಾವು ಉಳಿದುಕೊಂಡಿದ್ದ ಮನೆಯ ಪಕ್ಕದಲ್ಲಿ ಕೆಲಸ ಆರಂಭಿಸುತ್ತಾರೆ. 2019ರ ಮೇ ತಿಂಗಳಲ್ಲಿ ಇದರ ಕೆಲಸ ಆರಂಭಿಸಿದ ಅಶೋಕ್ 2021ರ ನವೆಂಬರ್ ವೇಳೆಗೆ ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಅದಕ್ಕೋಸ್ಕರ ಅನೇಕ ಯುಟ್ಯೂಬ್ ಚಾನಲ್, ಪುಸ್ತಕ ಅಭ್ಯಾಸ ಮಾಡಿದ್ದಾರೆ. ಜೊತೆಗೆ ಅನೇಕ ತಜ್ಞರ ಸಹಾಯವನ್ನು ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಮೂರು ತಿಂಗಳ ಪರೀಕ್ಷಾ ಹಾರಾಟ ನಡೆಸಿ, ಇದೀಗ ಪರವಾನಿಗೆ ಸಹ ಪಡೆದುಕೊಂಡಿದ್ದಾರೆ.