ತಿರುವನಂತಪುರಂ (ಕೇರಳ):ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಯ ಕುರಿತಾದಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸುವುದನ್ನು ವಿರೋಧಿಸಿದ್ದ ಕೇಂದ್ರದ ಮಾಜಿ ರಕ್ಷಣಾ ಸಚಿವ, ಹಿರಿಯ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಕೆ.ಆ್ಯಂಟನಿ ಇಂದು ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಾಕ್ಷ್ಯಚಿತ್ರವನ್ನು ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವ ಸಾಕ್ಷ್ಯಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದೇನೆ. ನನಗೆ ಹಲವಾರು ನಿಂದನಾತ್ಮಕ ಕರೆಗಳು ಬಂದಿವೆ. ನಾನು ಎಲ್ಲಿಯೇ ಇದ್ದರೂ ಜೀವನ ಮುಂದುವರಿಯುತ್ತದೆ. ಕಾಂಗ್ರೆಸ್‌ನ ಎಲ್ಲ ಜವಾಬ್ದಾರಿಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಪತ್ರದ ಸಮೇತ ಬರೆದುಕೊಂಡಿದ್ದಾರೆ. ಅನಿಲ್ ಆ್ಯಂಟನಿ ಕೆಪಿಸಿಸಿ ಡಿಜಿಟಲ್ ಮೀಡಿಯಾದ ಸಂಚಾಲಕ ಮತ್ತು ರಾಷ್ಟ್ರೀಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು.
ಇದು ಅನಿಲ್ ಆ್ಯಂಟನಿ ಮಾಡಿದ ಟ್ವೀಟ್:ಬಿಬಿಸಿ ಚಿತ್ರಿಸಿದ ವಿವಾದಿತ ಸಾಕ್ಷ್ಯಚಿತ್ರವನ್ನು ದೇಶದಲ್ಲಿ ಪ್ರದರ್ಶಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಬೆಂಬಲಿಸಿದ್ದ ಅನಿಲ್ ಆ್ಯಂಟನಿ ಅವರು ಟ್ವೀಟ್ ಮಾಡಿ ಪ್ರದರ್ಶನ ಮಾಡಬಾರದು ಎಂದು ಹೇಳಿದ್ದರು. "ಬಿಜೆಪಿಯೊಂದಿಗೆ ನಮಗೆ ದೊಡ್ಡ ಭಿನ್ನಾಭಿಪ್ರಾಯವಿದೆ. ಆದರೆ, ಭಾರತದ ಸಂಸ್ಥೆಗಳ ಮೇಲೆ ಬ್ರಿಟನ್ನ ಮಾಧ್ಯಮವೊಂದು ಅಭಿಪ್ರಾಯ ರೂಪಿಸುವುದನ್ನು ಒಪ್ಪಲಾಗದು. ಅದು ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ. ಬಿಬಿಸಿ ಮಾಧ್ಯಮದ ಅಭಿಪ್ರಾಯ, ಸಾಕ್ಷ್ಯಚಿತ್ರದ ರೂವಾರಿ, ಬ್ರಿಟನ್ ವಿದೇಶಾಂಗ ಸಚಿವ ಜಾಕ್ ಸ್ಟ್ರಾ ಅವರ ನಿಲುವು ಬೆಂಬಲಿಸುವುದು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ" ಎಂದು ಟ್ವೀಟ್ನಲ್ಲಿ ಹೇಳಿದ್ದರು.
ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ನಾಯಕ ರಾಹುಲ್ ಗಾಂಧಿ ಸೇರಿದಂತೆ, ಪಕ್ಷವೇ ಒಪ್ಪಿ ಬೆಂಬಲದ ಹೇಳಿಕೆ ನೀಡಿದೆ. ಆದರೆ, ಕೇಂದ್ರದ ಮಾಜಿ ರಕ್ಷಣಾ ಸಚಿವರ ಪುತ್ರರಾದ ಅನಿಲ್ ಆ್ಯಂಟನಿ ನೀಡಿದ ಈ ಹೇಳಿಕೆ ಪಕ್ಷದ ನಿಲುವಿನ ವಿರುದ್ಧವಾಗಿದೆ. "ಅನಿಲ್ ಆ್ಯಂಟನಿ ಪ್ರಧಾನಿ ಮೋದಿಯ ಚಮಚಾ" ಎಂದು ಕಟುವಾಗಿ ಟೀಕಿಸಲಾಗಿದೆ. ಪಕ್ಷದ ಹಿರಿಯ ನಾಯಕರ ಪುತ್ರನ ಹೇಳಿಕೆಗೆ ಕೇರಳದಲ್ಲಿ ಭಾರಿ ವಿರೋಧ ಕೂಡ ವ್ಯಕ್ತವಾಗಿದೆ.