ವಿಜಯನಗರಂ (ಆಂಧ್ರ ಪ್ರದೇಶ): ವಕೀಲರೊಬ್ಬರು ತಮ್ಮ ಪತ್ನಿಯನ್ನು ಸತತವಾಗಿ 11 ವರ್ಷಗಳ ಕಾಲ ಹೊರ ಪ್ರಪಂಚದಿಂದ ದೂರುವಿಟ್ಟು ಮನೆಯಲ್ಲೇ ಬಂಧಿ ಮಾಡಿದ್ದ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸುದೀರ್ಘ ದಿನಗಳಿಂದ ಮಗಳು ಸಂಪರ್ಕಕ್ಕೆ ಸಿಗದ ಕಾರಣ ಪೋಷಕರು ಪೊಲೀಸರ ಮೊರೆ ಹೋದ ನಂತರ, ಗೃಹ ಬಂಧನದಿಂದ ಈ ಮಹಿಳೆಗೆ ಮುಕ್ತಿ ಸಿಕ್ಕಿದೆ.
ಸಾಯಿ ಸುಪ್ರಿಯಾ ಎಂಬ ಮಹಿಳೆಯೇ ಗಂಡನ ಮನೆಯ ಬಂಧನದಿಂದ ಹೊರ ಬಂದವರಾಗಿದ್ದು, ಗೋದಾವರಿ ಮಧುಸೂದನ್ ಎಂಬುವವರೇ ಪತ್ನಿಯನ್ನು ಕೂಡಿ ಹಾಕಿದ ವಕೀಲ ಎಂದು ತಿಳಿದು ಬಂದಿದೆ. ತಾಯಿ ಗೋದಾವರಿ ಉಮಾಮಹೇಶ್ವರಿ ಮತ್ತು ಸಹೋದರ ತಪ್ಪುದಾರಿಗೆಳೆಯುವ ಮಾತು ಕೇಳಿ ಮಧುಸೂಧನ್ ತಮ್ಮ ಪತ್ನಿಯನ್ನು 11 ವರ್ಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಬಂಧಿಸಿದ್ದರು ಎಂದು ನೊಂದ ಸಾಯಿ ಸುಪ್ರಿಯಾರ ಪೋಷಕರು ಹೇಳಿದ್ದಾರೆ.
ಏನಿದು ಪ್ರಕರಣ?: ಶ್ರೀಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಗೆ ಸೇರಿದ ಸಾಯಿ ಸುಪ್ರಿಯಾ ಅವರನ್ನು 2008ರಲ್ಲಿ ವಿಜಯನಗರಂ ಜಿಲ್ಲೆಯ ಮಧುಸೂದನ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಇಲ್ಲಿನ ಕಂಟೋನ್ಮೆಂಟ್ ಬಾಲಾಜಿ ಮಾರುಕಟ್ಟೆ ಬಳಿ ಮಧುಸೂದನ್ ಕುಟುಂಬ ವಾಸವಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಧುಸೂದನ್ ವೃತ್ತಿಯಲ್ಲಿ ವಕೀಲರಾಗಿದ್ದು, ತಾಯಿ ಹಾಗೂ ಸಹೋದರ ಮಾತು ಕೇಳಿ ಸಾಯಿ ಸುಪ್ರಿಯಾರನ್ನು ಹೊರ ಪ್ರಪಂಚದಿಂದ ದೂರು ಇಟ್ಟಿದ್ದರು. ಮನೆಯಲ್ಲೇ ಕೂಡಿ ಹಾಕಿ ತವರು ಮನೆಯವರ ಸಂಪರ್ಕಕ್ಕೂ ಬಾರದಂತೆ ಬಂಧಿಸಲಾಗಿತ್ತು.
ಸಂತ್ರಸ್ತೆಯ ಕುಟುಂಬಸ್ಥರು ಹಲವು ಬಾರಿ ತಮ್ಮ ಮಗಳು ಸಾಯಿ ಸುಪ್ರಿಯಾರ ಬಗ್ಗೆ ಕೇಳಿದಾಗ ತಮ್ಮ ವಕೀಲ ವೃತ್ತಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಮಧುಸೂದನ್ ಆರೋಪಿಸಿದ್ದರು. ಇದೇ ವಿಷಯದ ಮೇಲೆ ಸಂತ್ರಸ್ತ ಕುಟುಂಬ ಸದಸ್ಯರನ್ನು ಹೆದರಿಸುತ್ತಿದ್ದರು. ಪೋಷಕರು 11 ವರ್ಷಗಳಿಂದ ತಮ್ಮ ಮಗಳ ಬಗ್ಗೆ ಚಿಂತನೆಗೆ ಒಳಗಾಗಿದ್ದರು. ಕೊನೆಗೆ ತಾಳ್ಮೆ ಕಳೆದುಕೊಂಡ ಸಂತ್ರಸ್ತೆಯ ಪೋಷಕರು, ತಮ್ಮ ಮಗಳನ್ನು ಕೂಡಿ ಹಾಕಿರುವ ಕುರಿತಾಗಿ ಮಧುಸೂದನ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಪೊಲೀಸರಿಗೂ ಅಡ್ಡಿ: ಸಾಯಿ ಸುಪ್ರಿಯಾ ಪೋಷಕರು ಎಸ್ಪಿಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಫೆ.28ರಂದು ಮಧುಸೂದನ್ ಮನೆಗೆ ತೆರಳಿದ್ದಾರೆ. ಆದರೆ, ಆಗಲೂ ಕೂಡ ವಕೀಲ ಮಧುಸೂದನ್ ಪೊಲೀಸರಿಗೆ ಅಡ್ಡಿ ಪಡಿಸಿ, ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಯಾವುದೇ ಸರ್ಚ್ ವಾರಂಟ್ ಇಲ್ಲದೆ ನಮ್ಮ ಮನೆಯನ್ನು ಹುಡುಕಲು ನಿಮಗೆ ಅಧಿಕಾರವಿಲ್ಲ ಎಂದು ಪೊಲೀಸರನ್ನು ತಡೆದಿದ್ದಾರೆ.