ರಾಜಸ್ಥಾನ: ತಮ್ಮ ಮದುವೆಯು ಸ್ಮರಣೀಯವಾಗಿರಲಿ ಎಂಬ ಉದ್ದೇಶದಿಂದ ವಧು - ವರರು ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪಕ್ಕೆ ಬುಲೆಟ್, ಟ್ರ್ಯಾಕ್ಟರ್, ಕುದುರೆ, ಹಳೆಯ ವಿಂಟೇಜ್ ಕಾರು ಸೇರಿದಂತೆ ವಿಭಿನ್ನವಾಗಿ ಬರುವುದನ್ನು ನಾವು ನೋಡುತ್ತಿರುತ್ತೇವೆ. ಇದೀಗ, ಸೋಮವಾರದಂದು ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ವಿಶಿಷ್ಟ ಮದುವೆ ಮೆರವಣಿಗೆಯೊಂದು ಎಲ್ಲರ ಕಣ್ಮನ ಸೆಳೆದಿದೆ.
ಗುಡಮಲಾನಿ ಗ್ರಾಮದ ಪ್ರಕಾಶ್ ಚೌಧರಿ ಎಂಬುವರು ರೋಲಿ ಗ್ರಾಮದ ಮಮತಾ ಅವರನ್ನು ವರಿಸಿದ್ದಾರೆ. ಸೋಮವಾರ ಬೆಳಗ್ಗೆ ವರನ ಮನೆಯಿಂದ ಸಾಗಿದ ದಿಬ್ಬಣವು 51 ಕಿಲೋಮೀಟರ್ ದೂರದಲ್ಲಿರುವ ರೋಲಿ ಗ್ರಾಮಕ್ಕೆ ತೆರಳಿತು. 51 ಟ್ರ್ಯಾಕ್ಟರ್‌ಗಳಲ್ಲಿ 200 ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಿದ್ದರು. ಅದರಲ್ಲಿ ಒಂದು ಟ್ರ್ಯಾಕ್ಟರ್ ಅನ್ನು ವರನೇ ಓಡಿಸಿದ್ದಾನೆ.
ವಿಶಿಷ್ಟ ಮದುವೆ ಮೆರವಣಿಗೆ ಕುರಿತು ಮಾತನಾಡಿದ ವರನ ತಂದೆ ಜೇತಾರಾಮ್ , "ಟ್ರಾಕ್ಟರ್ ಅನ್ನು ಭೂಮಿಯ ಮಗ ಎಂದು ಪರಿಗಣಿಸಲಾಗಿದೆ. ನನ್ನ ಮದುವೆಯ ಮೆರವಣಿಗೆಯನ್ನು ಒಂದು ಟ್ರ್ಯಾಕ್ಟರ್‌ನಲ್ಲಿ ಮಾತ್ರ ಮಾಡಲಾಗಿತ್ತು, ಇದೀಗ ನನ್ನ ಮಗನ ವಿವಾಹ ಕಾರ್ಯಕ್ರಮದಲ್ಲಿ 51 ಟ್ರ್ಯಾಕ್ಟರ್‌ಗಳ ಮೂಲಕ ಮಾಡಿರುವುದು ಖುಷಿ ಕೊಟ್ಟಿದೆ. ಮೆರವಣಿಗೆಯು ರೋಲಿ ಗ್ರಾಮಕ್ಕೆ ತಲುಪಿದಾಗ ಎಲ್ಲರೂ ಆಶ್ಚರ್ಯಚಕಿತರಾದರು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಳಿಕ ಮಾತನಾಡಿದ ವರ ಚೌಧರಿ, "ನನ್ನ ಕುಟುಂಬದ ಪ್ರಧಾನ ಉದ್ಯೋಗ ಕೃಷಿ. ಎಲ್ಲರೂ ಕೃಷಿಯಲ್ಲಿದ್ದಾರೆ. ಅಲ್ಲದೇ, ಟ್ರ್ಯಾಕ್ಟರ್ ರೈತನ ಕೆಲಸವನ್ನು ಗುರುತಿಸುತ್ತದೆ. ನನ್ನ ತಂದೆಯ ಮದುವೆ ಮೆರವಣಿಗೆ ಒಂದೇ ಟ್ರ್ಯಾಕ್ಟರ್‌ನಲ್ಲಿ ನಡೆದಿತ್ತು. ಆದ್ದರಿಂದ ನಾವು ಈ ಬಾರಿ 51 ಟ್ರ್ಯಾಕ್ಟರ್‌ಗಳಲ್ಲಿ ಏಕೆ ಮಾಡಬಾರದು ಎಂದು ಯೋಚಿಸಿದೆವು" ಎಂದರು.