ಚೆಂಗಲ್‌ಪಟ್ಟು (ತಮಿಳುನಾಡು): ಗೂಡ್ಸ್ ರೈಲಿನ ಐದಕ್ಕೂ ಹೆಚ್ಚು ಬೋಗಿಗಳು ಚೆಂಗಲ್‌ಪಟ್ಟು ಬಳಿ ಹಳಿತಪ್ಪಿದ ಪರಿಣಾಮ ದಕ್ಷಿಣ ತಮಿಳುನಾಡಿನ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಚೆನ್ನೈ ಬಂದರಿಗೆ ಕಬ್ಬಿಣದ ರಾಡ್ಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿತ್ತು. ಮಾಹಿತಿ ತಿಳಿದ ತಕ್ಷಣ ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ತಪ್ಪಿದ್ದ ಹಳಿಗಳನ್ನು ತೆರವುಗೊಳಿಸಿ, ಈ ಭಾಗದ ರೈಲು ಸಂಚಾರವನ್ನು ನಿಯಂತ್ರಿಸಿದ್ದರು. ಇನ್ನು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದಕ್ಷಿಣ ತಮಿಳುನಾಡಿನಿಂದ ಚೆನ್ನೈ ಕಡೆಗೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪ್ರಯಾಣಿಕರು ಮತ್ತು ಸರಕು ಸೇವೆಗಳ ಸಾಗಣೆಗೆ ಅನುಕೂಲವಾಗುವಂತೆ ಅದಷ್ಟು ಬೇಗ ರೈಲು ಸಂಚಾರವನ್ನು ಪುನರ್ ಪ್ರಾರಂಭಿಸಲು ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ರೈಲ್ವೆ ಅಧಿಕಾರಿಗಳಿಗೆ ಅಧಿಕೃತ ಪ್ರಕಟಣೆ ಮೂಲಕ ರೈಲು ಸೇವೆಗಳ ಸ್ಥಗಿತಗೊಂಡಿರುವ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಹಳಿ ತಪ್ಪಿದ ಗೂಡ್ಸ್ ರೈಲು(ಮಹಾರಾಷ್ಟ್ರ):ಮತ್ತೊಂದೆಡೆ, ಮುಂಬೈನಿಂದ 100 ಕಿಲೋಮೀಟರ್ ದೂರದಲ್ಲಿರುವ ಕಸರಾ ಎಂಬಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿರುವ ಘಟನೆ ಭಾನುವಾರ ನಡೆದಿತ್ತು. ರೈಲ್ವೆ ಅಧಿಕಾರಿ ಹೇಳಿರುವ ಪ್ರಕಾರ, ನಿನ್ನೆ ಸಂಜೆ 6.30ರ ಸುಮಾರಿಗೆ ಸರಕು ತುಂಬಿದ್ದ ಗೂಡ್ಸ್ ರೈಲಿನ ಒಟ್ಟು ಏಳು ವ್ಯಾಗನ್‌ಗಳು ಹಳಿ ತಪ್ಪಿವೆ. ಇದರ ಪರಿಣಾಮ ಕಾಸರದಿಂದ ಇಗತ್‌ಪುರಿ ಡೈನ್ ಲೈನ್ ವಿಭಾಗ ಮತ್ತು ಮಿಡ್ಲ್ ಲೈನ್ ವಿಭಾಗದ ನಡುವಿನ ಮೇಲ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ, ಇಗತ್‌ಪುರಿ ಮತ್ತು ಕಾಸರ ಅಪ್‌ಲೈನ್ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದರು.
12261 ಮುಂಬೈ ಸಿಎಸ್‌ಎಂಟಿ-ಹೌರಾ ಎಕ್ಸ್‌ಪ್ರೆಸ್, 11401 ಸಿಎಸ್‌ಎಂಟಿ-ಅದಿಲಾಬಾದ್ ನಂದಿಗ್ರಾಮ್ ಎಕ್ಸ್‌ಪ್ರೆಸ್, 12105 ಸಿಎಸ್‌ಎಂಟಿ-ಗೊಂಡಿಯಾ ವಿದರ್ಭ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಉಳಿದಂತೆ ಕೆಲ ರೈಲುಗಳ ಸಂಚಾರ ಮಾರ್ಗವನ್ನು ಬೇರೆಡೆಗೆ ಬದಲಾಯಿಸಲಾಗಿದೆ. ಭಾನುವಾರ ಪ್ರಯಾಣವನ್ನು ಪ್ರಾರಂಭಿಸಬೇಕಿದ್ದ ಮೇಲ್ ಎಕ್ಸ್‌ಪ್ರೆಸ್ ರೈಲುಗಳಾದ, 17612 ಸಿಎಸ್‌ಎಂಟಿ ನಾಂದೇಡ್ ಎಕ್ಸ್‌ಪ್ರೆಸ್ ಅನ್ನು ಕಲ್ಯಾಣ್-ಕರ್ಜತ್-ಪುಣೆ-ದೌಂಡ್-ಲಾತೂರ್ ಮಾರ್ಗವಾಗಿ, 12105 ಸಿಎಸ್‌ಎಂಟಿ ಗೊಂಡಿಯಾ ಎಕ್ಸ್‌ಪ್ರೆಸ್ ಕಲ್ಯಾಣ್-ಪುಣೆ-ದೌಂಡ್-ಮನ್ಮದ್ ಮಾರ್ಗ, 12137 CSMT-ಫಿರೋಜ್‌ಪುರ ಪಂಜಾಬ್ ಮೇಲ್ ಅನ್ನು ದಿವಾ - ವಸಾಯಿ - ಉಧಾನ - ಜಲಗಾಂವ್ ಮಾರ್ಗ, 12289 CSMT ನಾಗ್ಪುರ ದುರಂತೋ ಎಕ್ಸ್‌ಪ್ರೆಸ್ ಅನ್ನು ದಿವಾ-ವಸಾಯಿ-ಉಧಾನ-ಜಲಗಾಂವ್ ಮಾರ್ಗ ಬದಲಾಯಿಸಲಾಗಿತ್ತು.
ಇದನ್ನೂ ಓದಿ:ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು