ತಿರುವನಂತಪುರಂ (ಕೇರಳ): ನೆರೆ ರಾಜ್ಯ ಕೇರಳದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ ಹಾಸ್ಟೆಲ್ನಲ್ಲಿ ಇಬ್ಬರು ವಿದ್ಯಾರ್ಥಿನಿಯರ ನಡುವೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗೆ ಕಾಯಿಸಿದ ಹಾಲಿನ ಪಾತ್ರೆಯಿಂದ ಸುಟ್ಟು ವಿಕೃತಿ ಮೆರೆದಿದ್ದಾಳೆ. ಇದರಿಂದ ಸಂತ್ರಸ್ತ ವಿದ್ಯಾರ್ಥಿನಿ ಆಸ್ಪತ್ರೆ ಸೇರಿದ್ದಾಳೆ. ಇದೇ ವೇಳೆ, ಘಟನೆಯ ಮಾಹಿತಿ ಪಡೆದ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ರಾಜಧಾನಿ ತಿರುವನಂತಪುರಂ ಸಮೀಪದ ವೆಲ್ಲಯಾಣಿ ಕೃಷಿ ಕಾಲೇಜಿನ ಹಾಸ್ಟೆಲ್ನಲ್ಲಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ತನ್ನ ಸಹಪಾಠಿಯ ಕೃತ್ಯದಿಂದ ಬೆನ್ನಿನ ಮೇಲೆ ತೀವ್ರ ಸುಟ್ಟಗಾಯಗಳಾಗಿರುವ ವಿದ್ಯಾರ್ಥಿನಿ ತಿರುವನಂತಪುರಂನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಪೊಲೀಸರು ಮಾಹಿತಿ ಪಡೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯಿಂದ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು ಲೋಹಿತಾ ಎಂದು ಗುರುತಿಸಲಾಗಿದೆ.
ನಡೆದಿದ್ದೇನು?: ವೆಲ್ಲಯಾಣಿ ಕೃಷಿ ಕಾಲೇಜಿನಲ್ಲಿ ನಾಲ್ಕನೇ ವರ್ಷದಲ್ಲಿ ಲೋಹಿತಾ ಓದುತ್ತಿದ್ದಾಳೆ. ಆಂಧ್ರ ಪ್ರದೇಶ ಮೂಲದ ಈ ವಿದ್ಯಾರ್ಥಿನಿ ತನ್ನದೇ ರಾಜ್ಯದ ಮತ್ತೊಬ್ಬ ವಿದ್ಯಾರ್ಥಿನಿಯೊಂದಿಗೆ ಹಾಸ್ಟೆಲ್ನಲ್ಲಿ ವಾಸವಾಗಿದ್ದರು. ಆದರೆ, ಯಾವುದೋ ಕಾರಣಕ್ಕೆ ಹಾಸ್ಟೆಲ್ ಕೊಠಡಿಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಜಗಳ ಶುರುವಾಗಿದೆ. ಆಗ ಹಾಲಿನ ಪಾತ್ರೆಯನ್ನು ಬಿಸಿ ಮಾಡಿ ತನ್ನ ಸಹಪಾಠಿಗೆ ಸುಟ್ಟಿದ್ದಾಳೆ. ಮೊಬೈಲ್ ಚಾರ್ಜರ್ನಿಂದ ತಲೆಗೆ ಹೊಡೆದಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಲೋಹಿತಾ ವಿರುದ್ಧ ಪೊಲೀಸರು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ. ಅಲ್ಲದೇ, ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಈ ಘಟನೆ ಸಂಬಂಧ ಕೇರಳ ವಿಶ್ವವಿದ್ಯಾನಿಲಯವು ತನಿಖೆಗಾಗಿ ನಾಲ್ವರು ಸದಸ್ಯರ ವಿಚಾರಣಾ ಸಮಿತಿಯನ್ನು ನೇಮಿಸಿದೆ. ಜೊತೆಗೆ ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿದೆ ಎಂದು ವರದಿಯಾಗಿದೆ.