ಅಮ್ರೇಲಿ : ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಚಿರತೆಯೊಂದು ಕೊಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಕ್ಟೋಬರ್ 28 ರಂದು ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಆ ಪ್ರದೇಶದಲ್ಲಿ ವಾಸಿಸುವ ಕೃಷಿ ಕೂಲಿಕಾರರ ಮಗಳು ಎಂದು ಗುರುತಿಸಲಾಗಿದೆ.
ಅರಣ್ಯಾಧಿಕಾರಿ ಜ್ಯೋತಿ ವಾಜ ಪ್ರಕಾರ, ಬಾಲಕಿ ಆಟವಾಡುತ್ತಿದ್ದ ವೇಳೆ ಚಿರತೆ ಏಕಾಏಕಿ ಆಕೆಯ ಮೇಲೆ ನುಗ್ಗಿ ಬಂದಿದೆ. ಘಟನಾ ಸ್ಥಳದಲ್ಲಿದ್ದ ಆಕೆಯ ಪೋಷಕರು ಮತ್ತು ಇತರರು ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಚಿರತೆ ಅಲ್ಲಿಂದ ಬಿಟ್ಟು ಓಡಿಹೋಗಿದೆ. ವೈದ್ಯಕೀಯ ನೆರವು ನೀಡಲು ತಕ್ಷಣದ ಪ್ರಯತ್ನ ನಡೆಸಿದ ಹೊರತಾಗಿಯೂ, ದಾಳಿಯ ಸಮಯದಲ್ಲಿ ಉಂಟಾದ ತೀವ್ರ ಗಾಯಗಳಿಂದ ಬಾಲಕಿ ಸಾವನ್ನಪ್ಪಿದ್ದಾಳೆ.
ಅಮ್ರೇಲಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯಿಂದಾಗಿ ಸರಣಿ ಸಾವು ಸಂಭವಿಸಿವೆ. ಅಕ್ಟೋಬರ್ 14 ರಂದು ಜಿಲ್ಲೆಯ ತಲಾಲಾ ತಾಲೂಕಿನ ವಡಾಲ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
ಗುಜರಾತ್ನಲ್ಲಿ ಚಿರತೆ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಅರಣ್ಯ ಇಲಾಖೆಯ ಇತ್ತೀಚಿನ ಗಣತಿಯ ಮಾಹಿತಿಯ ಪ್ರಕಾರ, 2023ರಲ್ಲಿ ರಾಜ್ಯದ ಚಿರತೆಗಳ ಸಂಖ್ಯೆ 2,274 ಎಂದು ತಿಳಿದುಬಂದಿದೆ. ಇದು 2016 ರ ಅಂಕಿ-ಅಂಶ (1,395) ಗಳಿಗಿಂತ ಗಣನೀಯವಾಗಿ 63 ಶೇಕಡಾ ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
ಇತ್ತೀಚಿನ ಘಟನೆ - 4 ವರ್ಷದ ಬಾಲಕಿ ಎಳೆದೊಯ್ದು ತಿಂದು ಹಾಕಿದ್ದ ಚಿರತೆ : ತಿರುಮಲ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದ ವೇಳೆ ಚಿರತೆ ದಾಳಿ ಮಾಡಿ ಬಾಲಕಿಯನ್ನು ಹೊತ್ತೊಯ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದು ಕೊಂದು (ಸೆಪ್ಟೆಂಬರ್ 3-2023) ಹಾಕಿತ್ತು. ಇದು ಕಾಡಂಚಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು. ಕಾಡುಪ್ರಾಣಿ ಸೆರೆಗಾಗಿ ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದರು.
ಉಧಂಪುರ ಜಿಲ್ಲೆಯ ಅಪ್ಪರ್ ಬಂಜಾಲಾ ಗ್ರಾಮದ ನಾಲ್ಕು ವರ್ಷದ ತನು ಚಿರತೆಗೆ ದಾಳಿಗೆ ಬಲಿಯಾದ ಬಾಲಕಿ. ರಾತ್ರಿ ಮನೆಯಿಂದ ಹೊರಗೆ ಬಂದಾಗ ಚಿರತೆ ಆಕೆಯ ಮೇಲೆ ದಾಳಿ ಮಾಡಿ ಎಳೆದೊಯ್ದಿತ್ತು. ಎಷ್ಟೊತ್ತಾದರೂ ಮಗಳು ಕಾಣಿಸದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದರು. ಕಾಡುಪ್ರಾಣಿ ದಾಳಿ ನಡೆಸಿರುವ ಸುಳಿವು ಸಿಕ್ಕಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಜನರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದರು. ಬಳಿಕ ಭಾನುವಾರ ಮುಂಜಾನೆ ಬಾಲಕಿಯ ಅರೆಬರೆ ದೇಹ ಅರಣ್ಯದೊಳಗೆ ಬಿದ್ದಿದ್ದನ್ನು ರಕ್ಷಣಾ ತಂಡಗಳು ಪತ್ತೆ ಹಚ್ಚಿದ್ದವು. ಇದು ಚಿರತೆಯ ದಾಳಿ ಎಂದು ಅಧಿಕಾರಿಗಳು ಗುರುತಿಸಿದ್ದರು. ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಇಲಾಖೆಯು ಅದನ್ನು ಸೆರೆ ಹಿಡಿಯಲು ಅರಣ್ಯದ ವಿವಿಧೆಡೆ ಬೋನುಗಳನ್ನು ಇಟ್ಟಿದ್ದರು. ಈ ಘಟನೆಯ ನಂತರ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದರು. ಎಚ್ಚರದಿಂದಿರಲು ಸೂಚಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ:Leopard Attack: ರಾತ್ರಿ ಹೊರಬಂದಾಗ 4 ವರ್ಷದ ಬಾಲಕಿ ಎಳೆದೊಯ್ದು ತಿಂದು ಹಾಕಿದ ಚಿರತೆ