ನಾಗಪುರ (ಮಹಾರಾಷ್ಟ್ರ): ತಂದೆ-ತಾಯಿಯೇ ತಮ್ಮ ಆರು ವರ್ಷದ ಸ್ವಂತ ಮಗಳಿಗೆ ದೆವ್ವ ಹಿಡಿದಿದೆ ಎಂಬ ಶಂಕೆಯಿಂದ ಆ ಬಾಲಕಿಯನ್ನು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ಕೊಲೆ ಸಂಬಂಧ ಪೊಲೀಸರು ಈಗಾಗಲೇ ಆರೋಪಿ ತಂದೆ-ತಾಯಿ ಹಾಗೂ ಬಾಲಕಿಯ ಚಿಕ್ಕಮ್ಮಳನ್ನು ಬಂಧಿಸಿದ್ದಾರೆ.
ಇಲ್ಲಿನ ಸುಭಾಷ್ ನಗರದ ನಿವಾಸಿಗಳಾದ ಸಿದ್ಧಾರ್ಥ್ ಚಿಮನೆ ಮತ್ತು ರಂಜನಾ ಚಿಮನೆ ಎಂಬುವವರ ಮಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವೇಳೆ ಆಕೆಯ ಹಾವಭಾವಗಳು ವಿಭಿನ್ನವಾಗಿದ್ದವು. ಹೀಗಾಗಿ ಮಗಳಿಗೆ ದೆವ್ವ ಹಿಡಿದಿದೆ ಎಂದು ಪೋಷಕರು ಅನುಮಾನಗೊಂಡಿದ್ದರು. ಅಲ್ಲದೇ, ನಕಲಿ ಬಾಬಾನ ಬಳಿಗೂ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.
ಈ ಬಾಬಾನ ಸಲಹೆಯ ಮೇರೆಗೆ ಬಾಲಕಿಗೆ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲು ಪ್ರಾರಂಭಿಸಿದ್ದರು. ಆದರೂ, ಯಾವುದೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಶುಕ್ರವಾರ ಮತ್ತು ಶನಿವಾರದ ನಡುವಿನ ಮಧ್ಯಂತರ ರಾತ್ರಿ ಚಿಮನೆ ದಂಪತಿ ಮತ್ತು ಮತ್ತೊಬ್ಬ ಮಹಿಳೆ (ಚಿಕ್ಕಮ್ಮ) ಬಾಲಕಿಗೆ ಅಮಾನುಷವಾಗಿ ಥಳಿಸಿದ್ದಾರೆ. ಆಗ ತೀವ್ರವಾದ ಹೊಡೆತಗಳನ್ನು ತಾಳಲಾರದೆ ಬಾಲಕಿ ಕುಸಿದುಬಿದ್ದಿದ್ದಾಳೆ.