ನೆಲ್ಲೂರು (ಆಂಧ್ರಪ್ರದೇಶ) : ಇಲ್ಲಿನ ನೆಲ್ಲೂರು ಜಿಲ್ಲೆಯಲ್ಲಿ ಭಾರಿ ರೈಲು ಅಪಘಾತವೊಂದು ತಪ್ಪಿದೆ. ಕವಲಿ ಮತ್ತು ಬಿಟ್ರಗುಂಟಾ ರೈಲು ನಿಲ್ದಾಣಗಳ ನಡುವೆ ನರಸಾಪುರದಿಂದ ಧರ್ಮಾವರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲು ಈ ದೊಡ್ಡ ಅವಘಡದಿಂದ ಪಾರಾಗಿದೆ.
ಈ ಮಾರ್ಗದಲ್ಲಿ ಮುಸುನೂರು ಬಳಿ ದುಷ್ಕರ್ಮಿಗಳು ಎರಡು ಮೀಟರ್ ಉದ್ದದ ರಾಡ್ ತುಂಡನ್ನು ಟ್ರ್ಯಾಕ್ ಮೇಲೆ ಹಾಕಿದ್ದರು. ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಲೋಕೋಪೈಲಟ್ ಇದನ್ನು ಗಮನಿಸಿ ತಕ್ಷಣವೇ ರೈಲಿನ ವೇಗವನ್ನು ನಿಯಂತ್ರಿಸಿದ್ದಾರೆ. ಇದರಿಂದಾಗಿ ರೈಲು ಕಡಿಮೆ ವೇಗದಲ್ಲಿ ಚಲಿಸಿ ಟ್ರ್ಯಾಕ್‌ನ ರಾಡ್ ತುಂಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅದೃಷ್ಟವಶಾತ್ ಸಂಭವಿಸಬೇಕಿದ್ದ ಅನಾಹುತವೊಂದು ತಪ್ಪಿದೆ. ಕೂಡಲೇ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಂತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳಿಂದ ಮುಂದುವರೆದ ತನಿಖೆ: ಇದು ಸಮಾಜಘಾತುಕ ಶಕ್ತಿಗಳ ಕುತಂತ್ರವೋ ಅಥವಾ ಪುಂಡ ಪೋಕರಿಗಳ ಕುತಂತ್ರವೋ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಮುಂಭಾಗದಲ್ಲಿದ್ದ ಸುರಕ್ಷತಾ ಸಿಬ್ಬಂದಿಗೆ ಪೆಟ್ಟು ಬಿದ್ದಿದ್ದು, ಹಳಿ ತುಂಡಾಗಿ ಪಕ್ಕಕ್ಕೆ ಬಿದ್ದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಹಳಿಗೆ ಅಡ್ಡಲಾಗಿ ಇಟ್ಟಿದ್ದ ಕಬ್ಬಿಣದ ತುಂಡಿಗೆ ಇಂಜಿನ್ ಹತ್ತಿಸಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕನ ಎಚ್ಚರಿಕೆಯಿಂದ ತಪ್ಪಿದ ರೈಲು ದುರಂತ: ಇನ್ನೊಂದೆಡೆ ತ್ರಿವಳಿ ರೈಲು ದುರಂತದಿಂದ ದೇಶ ಮತ್ತು ವಿಶ್ವದಾದ್ಯಂತ ಸುದ್ದಿಯಾಗಿದ್ದ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಲಿದ್ದ ಮತ್ತೊಂದು ಭೀಕರ ಅಪಘಾತವೊಂದು (ಜುಲೈ 18-2023)ರಂದು ತಪ್ಪಿತ್ತು. ನೀಲಗಿರಿ ರೋಡ್ ರೈಲು ನಿಲ್ದಾಣದ ಬರುನಾ ಸಿಂಗ್ ಚಕ್ ಬಳಿ ಮೆಮು ರೈಲು ಲೋಕೋ ಪೈಲಟ್ ಮುಂಜಾಗ್ರತೆಯಿಂದ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿತ್ತು.
ವರದಿಗಳ ಪ್ರಕಾರ, ರೈಲು ಕೆಲವು ಕೆಲಸಗಳು ನಡೆಯುತ್ತಿದ್ದ ಲೂಪ್ ಲೈನ್ ಟ್ರ್ಯಾಕ್ ಅನ್ನು ಪ್ರವೇಶಿಸಿತ್ತು. ಆಗ ಲೋಕೋ ಪೈಲಟ್ ತಕ್ಷಣವೇ ಎಚ್ಚೆತ್ತು ಬ್ರೇಕ್ ಹಾಕಿದ್ದರಿಂದಾಗಿ ನಡೆಯಲಿದ್ದ ದುರಂತವೊಂದು ತಪ್ಪಿತ್ತು. ಮೆಮು ರೈಲು ಭದ್ರಕ್ ಜಿಲ್ಲೆಯಿಂದ ಬಾಲಸೋರ್‌ಗೆ ತೆರಳುತ್ತಿದ್ದಾಗ ಟ್ರ್ಯಾಕ್ ಎಂಡ್‌ಪಾಯಿಂಟ್‌ನಲ್ಲಿ ಕ್ರಾಸ್ ಓವರ್ ಅಥವಾ ಇಂಟರ್‌ಲಾಕ್ ಸಮಸ್ಯೆಯನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ಬ್ರೇಕ್ ಹಾಕಿದ್ದರು.
ಚಾಲಕ ನಂತರ ರೈಲನ್ನು ಬಾಲಸೋರ್ ಕಡೆಗೆ ತಿರುಗಿಸಿದ್ದರು. ಇದರಿಂದಾಗಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ರೈಲುಗಳು ಕೂಡಾ ಕೆಲಕಾಲ ಸಂಚಾರದಿಂದ ಸ್ಥಗಿತಗೊಂಡಿದ್ದವು. ಈ ಬಗ್ಗೆ ಬಿಜೈಧರ್ ಬಾರಿಕ್ ಎಂಬ ಪ್ರಯಾಣಿಕ ಮಾತನಾಡಿ, “ಹಳಿಯಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ರೈಲ್ವೆ ಚಾಲಕ ಗುರುತಿಸಿ ಬ್ರೇಕ್ ಹಾಕಿದ್ದಾರೆ. ನಂತರ ರೈಲು ಸುಮಾರು 200 ರಿಂದ 300 ಮೀಟರ್ ಹಿಮ್ಮುಖವಾಯಿತು. ಆಗ ನಾವು ರೈಲಿನಿಂದ ಕೆಳಗಿಳಿದೆವು'' ಎಂದು ಹೇಳಿದ್ದರು.
ಇದನ್ನೂ ಓದಿ:ಚಾಲಕನ ಎಚ್ಚರಿಕೆಯಿಂದ ಬಾಲಸೋರ್‌ನಲ್ಲಿ ತಪ್ಪಿದ ರೈಲು ದುರಂತ