ಚಾರ್ಲ(ಛತ್ತೀಸ್ಗಢ):ಇತ್ತೀಚೆಗೆ ಹೊಲಗಳಿಗೆ ಕ್ರಿಮಿನಾಶಕ ಸಿಂಪಡಿಸಲು ಡ್ರೋನ್ಗಳನ್ನು ಬಳಸುವುದು ಹೆಚ್ಚಿದೆ. ಅಲ್ಲದೇ ಇದರ ಉಪಯೋಗವನ್ನು ಮನಗಂಡಿರುವ ಕೆಲವು ರೈತರು ಇವುಗಳನ್ನು ಸ್ವಂತಕ್ಕೆ ಖರೀದಿಸುತ್ತಿದ್ದಾರೆ. ಆದರೆ ಛತ್ತೀಸ್‌ಗಢದ ರೈತರೊಬ್ಬರು ತಮ್ಮ ಜಮೀನಿನ ಮೇಲ್ವಿಚಾರಣೆಗೆ ಹೆಲಿಕಾಪ್ಟರ್ ಖರೀದಿಸಲು ಮುಂದಾಗಿದ್ದಾರೆ. ತೆಲಂಗಾಣದಿಂದ ಸುಮಾರು 300 ಕಿ. ಮೀ ದೂರದಲ್ಲಿರುವ ಕೊಂಡಗಾಂವ್ ಜಿಲ್ಲೆಯ ರಾಜಾರಾಂ ತ್ರಿಪಾಠಿ ತಮ್ಮ 1000 ಎಕರೆ ಜಮೀನಿನ ಮೇಲ್ವಿಚಾರಣೆಗಾಗಿ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಲು ಹೊರಟಿದ್ದಾರೆ. ಈಗಾಗಲೇ ಹಾಲೆಂಡ್ ನ ರಾಬಿನ್ ಸನ್ ಕಂಪನಿಯ ಆರ್-44 ಮಾದರಿಯ (ನಾಲ್ಕು ಸೀಟುಗಳು) ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಕೀಟನಾಶಕಗಳ ಸಿಂಪಡಣೆ ಮತ್ತು ಇತರ ಕೃಷಿ ಕೆಲಸಗಳಿಗೆ ಇದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಯುರೋಪ್ ರೈತರಿಂದ ಪ್ರೇರಣೆಗೊಂಡ ರಾಜಾರಾಂ: ಕೃಷಿಕ ರಾಜಾರಾಂ ಅವರು ಇಂಗ್ಲೆಂಡ್ ಮತ್ತು ಜರ್ಮನಿಗೆ ಭೇಟಿ ನೀಡಿದಾಗ, ಅವರು ರಸಗೊಬ್ಬರಗಳನ್ನು ಸಿಂಪಡಿಸಲು ಹೆಲಿಕಾಪ್ಟರ್‌ಗಳನ್ನು ಬಳಸುವುದನ್ನು ನೋಡಿದ್ದರು. ಹೆಲಿಕಾಪ್ಟರ್ನಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದು ತಿಳಿದ ಬಳಿಕ ಖರೀದಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು. ಅವರ ಮಗ ಮತ್ತು ಕಿರಿಯ ಸಹೋದರನನ್ನು ಪೈಲಟ್ ತರಬೇತಿಗಾಗಿ ಉಜ್ಜಯಿನಿಯ ಏವಿಯೇಷನ್ ಅಕಾಡೆಮಿಗೆ ಕಳುಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಕೆಲಸ ಬಿಟ್ಟು ರೈತರಾದ ತ್ರಿಪಾಠಿ :ಬಸ್ತಾರ್ನಲ್ಲಿ (ಕೊಂಡಗಾಂವ್ ಜಿಲ್ಲೆಯಿಂದ ಬೇರ್ಪಟ್ಟ) ರೈತ ಕುಟುಂಬದಲ್ಲಿ ಜನಿಸಿದ ರಾಜಾರಾಂ 1998 ರಲ್ಲಿ ತಮ್ಮ ಬ್ಯಾಂಕ್ ಉದ್ಯೋಗವನ್ನು ತೊರೆದು ಕೃಷಿಕರಾದರು. ಪ್ರಸ್ತುತ ಬಸ್ತಾರ್ ಮತ್ತು ಕೊಂಡಗಾಂವ್ ಜಿಲ್ಲೆಗಳಲ್ಲಿ ಬಿಳಿ ಕಡಲೆಕಾಯಿ ಮತ್ತು ಕರಿಮೆಣಸು ಹೆಚ್ಚಾಗಿ ಬೆಳೆಯಲಾಗುತ್ತಿದೆ ಮತ್ತು ಗಿಡಮೂಲಿಕೆ ಸಂಸ್ಥೆಯನ್ನು ನಡೆಸಲಾಗುತ್ತಿದೆ. 400 ಆದಿವಾಸಿ ಕುಟುಂಬಗಳ ನೆರವಿನಿಂದ 1000 ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇದುವರೆಗೆ ರಾಷ್ಟ್ರಮಟ್ಟದಲ್ಲಿ ನಾಲ್ಕು ಬಾರಿ ಉತ್ತಮ ರೈತ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಕಂಪನಿಯ ಮೂಲಕ ವರ್ಷಕ್ಕೆ 25 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಕರಿಮೆಣಸು ಯುರೋಪ್ ಮತ್ತು ಅಮೆರಿಕಕ್ಕೆ ರಫ್ತಾಗುತ್ತಿದೆ.