ಹೈದರಾಬಾದ್ (ತೆಲಂಗಾಣ):ಮಕ್ಕಳ ಮಾರಾಟ ದಂಧೆಯ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ. ಗರ್ಭದಲ್ಲಿರುವಾಗಲೇ ಶಿಶುಗಳ ಜೀವಕ್ಕೆ ಬೆಲೆ ಕಟ್ಟುವುದು ಹಾಗೂ ಹೊಕ್ಕುಳಬಳ್ಳಿಯನ್ನು ಕತ್ತರಿಸುವ ಮುನ್ನವೇ ದಂಧೆಕೋರರು ಪೋಷಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಆತಂಕಕಾರಿ ವಿಷಯ ಎಂದರೆ, ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೂಡ ಈ ದಂಧೆಗೆ ಕೈಗೊಂಡಿದ್ದಾರೆ ಎಂಬ ಆರೋಪ.
ಹೌದು, ಇತ್ತೀಚೆಗೆ ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ. ದಾದರ್ ರೈಲು ನಿಲ್ದಾಣದಲ್ಲಿ ಮಗುವಿನೊಂದಿಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ತೆಲಂಗಾಣದ ಹೈದರಾಬಾದ್‌ನಲ್ಲಿ ಈ ದಂಧೆಯ ಮಾಸ್ಟರ್ಮೈಂಡ್ಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೇ, ಮುಂಬೈ ಪೊಲೀಸರು ಮಾಸ್ಟರ್‌ಮೈಂಡ್‌ಗಳ ಪತ್ತೆಗಾಗಿ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇಲ್ಲಿ ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದ್ದು ಹೇಗೆ?: ಕೆಲ ದಿನಗಳ ತಮ್ಮ ಮಗು ನಾಪತ್ತೆಯಾಗಿರುವ ಬಗ್ಗೆ ಪೋಷಕರೊಬ್ಬರು ಮಹಾರಾಷ್ಟ್ರದ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ತನಿಖೆ ಆರಂಭಿಸಿದ್ದ ಪೊಲೀಸರು, ಮಕ್ಕಳ ಕಳ್ಳಸಾಗಣೆ ಏಜೆಂಟ್ ಸಮಾಧಾನ್ ಪಾಟೀಲ್ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ. ಈತ ಹೈದರಾಬಾದ್‌ನಲ್ಲಿ ಖರೀದಿಸಿದ್ದ ಮಗುವನ್ನು ಮಾರಾಟ ಮಾಡಲು ವಿಫಲವಾದ ನಂತರ ಮುಂಬೈಗೆ ಹಿಂದಿರುಗುತ್ತಿದ್ದ. ಈ ವೇಳೆ, ದಾದರ್ ರೈಲು ನಿಲ್ದಾಣದಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ ದೊರೆತ ಮಾಹಿತಿ ಮೇರೆಗೆ ಪೊಲೀಸರು ಈ ದಂಧೆಯ ಇತರ ಐವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.