ಜಲ್ಗಾಂವ್ (ಮಹಾರಾಷ್ಟ್ರ): ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದು, ಇನ್ನೋರ್ವ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಹೆಲಿಕಾಪ್ಟರ್ ಅಪಘಾತ ಸಂಭವಿಸಿದ ಸ್ಥಳ ಈ ಹೆಲಿಕಾಪ್ಟರ್ ಮಹಾರಾಷ್ಟ್ರದ ಎನ್‌ಎಂಐಎಂಎಸ್ ಅಕಾಡೆಮಿ ಆಫ್ ಏವಿಯೇಷನ್‌ಗೆ ಸೇರಿದ್ದಾಗಿದೆ. ಜಲ್ಗಾಂವ್ ಜಿಲ್ಲೆಯ ಚೋಪ್ಡಾ ತಾಲ್ಲೂಕಿನ ವರ್ಡಿ ಪ್ರದೇಶದಲ್ಲಿರುವ ಸಾತ್ಪುರ ಪರ್ವತ ಪ್ರದೇಶದ ಕೆಳಗಿರುವ ದಟ್ಟ ಕಾಡಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇಂದು (ಶುಕ್ರವಾರ) ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಗೂರ್ಖಾಗಳಿಂದ ಬೆಳಕಿಗೆ ಬಂದ ಘಟನೆ:
ಸಾತ್ಪುರದ ಕಾಡಿನಲ್ಲಿರುವ ಗೂರ್ಖಾಗಳಿಂದಾಗಿ ಈ ಘಟನೆ ಬೆಳಕಿಗೆ ಬಂದಿತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚೋಪ್ಡಾ ತಾಲೂಕಿನ ತಹಶೀಲ್ದಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್ಗಳಿದ್ದರು. ಇದರಲ್ಲಿ ಒಬ್ಬರು ಮಹಿಳಾ ಪೈಲಟ್.
ಹೆಲಿಕಾಪ್ಟರ್ ಅಪಘಾತ ಸಂಭವಿಸಿದ ಸ್ಥಳ ಹೆಲಿಕಾಪ್ಟರ್ ಅಪಘಾತದಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದು ಇವರು ಫ್ಲೈಟ್ ಇನ್ಸ್ಟ್ರಕ್ಟರ್ ಆಗಿದ್ದರು. ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ಟ್ವೀಟ್:
ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದು, "ಮಹಾರಾಷ್ಟ್ರದ ಎನ್‌ಎಂಐಎಂಎಸ್ ಅಕಾಡೆಮಿ ಆಫ್ ಏವಿಯೇಷನ್ (NMIMS Academy of Aviation, Maharashtra) ಗೆ ಸೇರಿದ ತರಬೇತಿ ಚಾಪರ್ವೊಂದರ ದುರಂತದ ಬಗ್ಗೆ ಕೇಳಿದಾಗ ಆಘಾತವಾಯಿತು. ತನಿಖಾ ತಂಡವನ್ನು ಸ್ಥಳಕ್ಕೆ ತೆರಳುತ್ತಿದೆ. ದುರದೃಷ್ಟವಶಾತ್, ನಾವು ಫ್ಲೈಟ್ ಇನ್ಸ್ಟ್ರಕ್ಟರ್ ಅನ್ನು ಕಳೆದುಕೊಂಡಿದ್ದೇವೆ ಮತ್ತು ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಿಗೆ ನನ್ನ ಸಂತಾಪ ಮತ್ತು ತರಬೇತಿ ನಿರತ ಪೈಲಟ್ ತ್ವರಿತ ಚೇತರಿಕೆಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ:17 ಪ್ರಯಾಣಿಕರಿದ್ದ ರಷ್ಯಾದ ವಿಮಾನ ಕಣ್ಮರೆ: ಶೋಧ ಕಾರ್ಯ ಆರಂಭ