ಕರ್ನಾಟಕ

karnataka

ETV Bharat / bharat

Gun exploded: ಬಂದೂಕಿಗೆ ತುಂಬುವಾಗ ಸಿಡಿದು ಎದೆ ಸೀಳಿದ ಗುಂಡು.. ಆಟವಾಡುತ್ತಿದ್ದಾಗ 4ರ ಬಾಲೆ ದಾರುಣ ಸಾವು - ನಾಡಬಂದೂಕು ಸಿಡಿದು ಬಾಲಕಿ ಸಾವು

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ನಾಡಬಂದೂಕಿನ ಗುಂಡೊಂದು ತಾಕಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಬಂದೂಕಿಗೆ ತುಂಬುವಾಗ ಸಿಡಿದು ಎದೆ ಸೀಳಿದ ಗುಂಡು
ಬಂದೂಕಿಗೆ ತುಂಬುವಾಗ ಸಿಡಿದು ಎದೆ ಸೀಳಿದ ಗುಂಡು

By

Published : Aug 16, 2023, 9:49 AM IST

ಕಾಕಿನಾಡ (ಆಂಧ್ರಪ್ರದೇಶ) :ಪೋಷಕರೊಂದಿಗೆ ಸಿಹಿ ಮಾತುಗಳನ್ನು ಹೇಳುತ್ತಾ ಮನೆ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕಿ ಏಕಾಏಕಿ ದೊತ್ತನೆ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಇದನ್ನು ಕಂಡ ಪೋಷಕರು ಏನಾಯಿತು ಎಂದು ನೋಡುವಷ್ಟರಲ್ಲಿ ಮಗು ಇಹಲೋಕ ತ್ಯಜಿಸಿದೆ. ಕಣ್ಣೆದುರು ಕುಣಿದಾಡುತ್ತಿದ್ದ ಬಾಲಕಿ ದಿಢೀರ್​ ಸಾವನ್ನಪ್ಪಿದ್ದು, ಕುಟುಂಬಸ್ಥರನ್ನು ಅಚ್ಚರಿಗೀಡು ಮಾಡಿದೆ. ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಮಗು ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಇಷ್ಟಕ್ಕೆಲ್ಲಾ ಕಾರಣ ಏನೆಂದು ಪರಿಶೀಲಿಸಿದಾಗ ನೆರೆ ಮನೆಯ ವ್ಯಕ್ತಿಯೊಬ್ಬ ಹಂದಿಗಳನ್ನು ಬೇಟೆಯಾಡಲು ಬಂದೂಕಿಗೆ ಮದ್ದುಗುಂಡುಗಳನ್ನು ತುಂಬುತ್ತಿದ್ದಾಗ ಗುಂಡೊಂದು ಅಚಾನಕ್ಕಾಗಿ ಸಿಡಿದು ಬಾಲಕಿಯ ಬೆನ್ನು ಸೀಳಿ, ಎದೆ ಹೊಕ್ಕಿತ್ತು. ಅಷ್ಟೇ, ಮನೆ ಮುಂದೆ ನಲಿದಾಡುತ್ತಿದ್ದ ಕಂದಮ್ಮ ಕಣ್ಣು ಮುಚ್ಚಿದ್ದಾಳೆ.

ಬೆನ್ನು ಸೀಳಿ ಎದೆಗೆ ತಾಕಿದ ಗುಂಡು:ಕಾಕಿನಾಡ ಜಿಲ್ಲೆಯ ತುಣಿ ಮಂಡಲದ ಲೊವಕೊತ್ತೂರು ಗ್ರಾಮದಲ್ಲಿ ಈ ದುರಂತ ಘಟನೆ ಮಂಗಳವಾರ ನಡೆದಿದೆ. ಗ್ರಾಮದ ಪಲಿವೇಲ ರಾಜು ಮತ್ತು ನಾಗಮಣಿ ದಂಪತಿ 4 ವರ್ಷದ ಮುದ್ದಾದ ಹೆಣ್ಣುಮಗು ಧನ್ಯಶ್ರೀ (4) ಸಾವಿಗೀಡಾದ ದುರ್ದೈವಿ. ಇಬ್ಬರು ಹೆಣ್ಣು ಮಕ್ಕಳಲ್ಲಿ ಈಕೆ ಹಿರಿಯಾಕೆ. ಮಂಗಳವಾರ ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಪಕ್ಕದ ಮನೆಯಲ್ಲಿ ಬಂದೂಕು ಸ್ಫೋಟಗೊಂಡಿದೆ. ಗುಂಡು ಧನ್ಯಶ್ರೀಗೆ ತಗುಲಿದೆ. ಕ್ಷಣಾರ್ಧದಲ್ಲಿ ಗುಂಡು ಮಗುವಿನ ಬೆನ್ನಿನಿಂದ ಎದೆಗೆ ಹೊಕ್ಕಿತ್ತು.

ದಿಢೀರನೇ ಕುಸಿದು ಬಿದ್ದ ಮಗುವನ್ನು ಕಂಡಾಗ ಕೈ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಬಾಲಕಿಗೆ ಏನು ತಾಕೀತು ಎಂಬುದೂ ಪೋಷಕರಿಗೆ ಗೊತ್ತಾಗಲಿಲ್ಲ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ, ಪರೀಕ್ಷಿಸಿದ ವೈದ್ಯರು ಬಾಲಕಿ ಎದೆಗೆ ಗುಂಡು ಬಡಿದಿದೆ. ಹೀಗಾಗಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಅಲ್ಪ ಸಮಯದಲ್ಲೇ ದುರಂತ ನಡೆದಿರುವುದು ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ವಿಷಯ ತಿಳಿದು ಗ್ರಾಮಾಂತರ ಸಿಐ ಸನ್ಯಾಸಿರಾವ್, ಎಸ್‌ಐ ವಿಜಯಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಯ ಬಂಧನ:ಪೊಲೀಸರ ಪ್ರಕಾರ, ಮೃತಪಟ್ಟ ಬಾಲಕಿ ಧನ್ಯಶ್ರೀ ಅವರ ಮನೆಯ ನೆರೆಹೊರೆಯವರಾದ ಸಿದ್ದಣ್ಣ ದುರ್ಗಾಪ್ರಸಾದ್ ಅವರ ಮನೆಯಲ್ಲಿ ಹಂದಿಗಳನ್ನು ಬೇಟೆಯಾಡಲು ನಾಡಬಂದೂಕಿಗೆ ಮದ್ದುಗುಂಡುಗಳನ್ನು ತುಂಬುತ್ತಿದ್ದಾಗ ಆಕಸ್ಮಿಕವಾಗಿ ಅದರಲ್ಲಿನ ಒಂದು ಗುಂಡು ಸಿಡಿದಿದೆ. ಇದರಿಂದಾಗಿ ದುರಂತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಭಾರಿ ಮಳೆಗೆ ಮನೆ ಕುಸಿದು ಅವಶೇಷಗಳಡಿ ಸಿಲುಕಿದ 7 ಮಂದಿ... ಮೂವರ ರಕ್ಷಣೆ..

ABOUT THE AUTHOR

...view details